ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರತಿ ಪಕ್ಷಗಳಲ್ಲಿಯೂ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಈಗ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಎಲ್ಲೆಡೆ ಚಾಲನೆ ಸಿಕ್ಕಿದೆ. ಈ ನಿಟ್ಟಿನಲ್ಲಿ ನವ ದೆಹಲಿಯಲ್ಲಿ ಸಭೆ ನಡೆಸುತ್ತಿರುವ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮೊನ್ನೆ ಮೊನ್ನೆಯಷ್ಟೇ ಬಿಜೆಪಿಯಿಂದ ಕಾಂಗ್ರೆಸ್‌ಗೆ ವಲಸೆ ಹೋಗಿರುವ ಜಯಪ್ರಕಾಶ್ ಹೆಗ್ಡೆ ಅವರಿಗೆ ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಅನ್ನು ನೀಡಲಾಗಿದ್ದರೆ, ಗೀತಾ ಶಿವರಾಜ್‌ಕುಮಾರ್ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಅಭ್ಯರ್ಥಿಗಳ ಆಯ್ಕೆ ಸಂಬಂಧ ಗುರುವಾರದಿಂದ ನವ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜತೆ ರಾಜ್ಯ ನಾಯಕರು ಸಭೆ ನಡೆಸುತ್ತಿದ್ದರು. ಇಲ್ಲಿ ಕರ್ನಾಟಕದ (Congress Karnataka) 14 ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿ 8 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ವಿವಿಧ ರಾಜ್ಯಗಳ ಒಟ್ಟು 39 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ.
ಈ ಎಂಟು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಗಳು ಇವರು
ಉಡುಪಿ-ಚಿಕ್ಕಮಗಳೂರು – ಜಯಪ್ರಕಾಶ್ ಹೆಗ್ಡೆ – ಬಂಟ್ಸ್
ಚಿತ್ರದುರ್ಗ – ಬಿ.ಎನ್ ಚಂದ್ರಪ್ಪ – ಎಸ್.ಸಿ
ತುಮಕೂರು – ಮುದ್ದಹನುಮೇಗೌಡ – ಒಕ್ಕಲಿಗ
ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್ – ಈಡಿಗ
ಹಾಸನ – ಶ್ರೇಯಸ್ ಪಟೇಲ್ – ಒಕ್ಕಲಿಗ
ವಿಜಯಪುರ – ರಾಜು ಆಲಗೂರು – ಎಸ್.ಸಿ
ಮಂಡ್ಯ – ವೆಂಕಟರಮಣೇಗೌಡ (ಸ್ಟಾರ್ ಚಂದ್ರು) – ಒಕ್ಕಲಿಗ
ಬೆಂಗಳೂರು ಗ್ರಾಮಾಂತರ – ಡಿ.ಕೆ. ಸುರೇಶ್ – ಒಕ್ಕಲಿಗ
ಈ ಎಂಟೂ ಕ್ಷೇತ್ರಗಳಲ್ಲಿ ಡಿ.ಕೆ. ಸುರೇಶ್ ಅವರು ಹಾಲಿ ಸಂಸದರಾಗಿದ್ದು, ಉಳಿದ ಕಡೆ ಬಹುತೇಕ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇಲ್ಲಿ ಹಲವು ರೀತಿಯ ಜಾತಿ ಸಮೀಕರಣವನ್ನು ಮಾಡಲಾಗಿದೆ. ಈಡಿಗ ಸಮುದಾಯದ ಪ್ರಾಬಲ್ಯವನ್ನೂ ಹೊಂದಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಗೀತಾ ಶಿವರಾಜ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಹಾಸನಕ್ಕೆ ಒಕ್ಕಲಿಗ ಸಮುದಾಯದ ಶ್ರೇಯಸ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಪ್ರಾಬಲ್ಯ ಇರುವ ಜಾತಿಗಳನ್ನು ಗಮನಿಸಿಯೇ ಟಿಕೆಟ್ ನೀಡಲಾಗಿದೆ ಎನ್ನಲಾಗಿದೆ. ಆದರೆ, ಚಿಕ್ಕಮಗಳೂರು ಕ್ಷೇತ್ರದ ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್‌ಗೆ ಸೇರ್ಪಡೆಯಾಗಬೇಕಿದೆ) ಹಾಗೂ ಚಿತ್ರದುರ್ಗದ ಬಿ.ಎನ್. ಚಂದ್ರಪ್ಪ ಹೆಸರನ್ನು ಪ್ರಕಟಿಸಿದ್ದರೂ ಸಹ ತಾತ್ಕಾಲಿಕವಾಗಿ (Seats on hold) ತಡೆಹಿಡಿಯಲಾಗಿದೆ.
ಈಗ ಕಾಂಗ್ರೆಸ್ ಎಷ್ಟು ಪಟ್ಟಿ ಬಿಡುಗಡೆ ಮಾಡುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ. ಒಂದಾ, ಎರಡೇ? ಮೂರೇ? ಹೀಗೆ ಎಷ್ಟು ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ. ಕೆಲವು ಕ್ಷೇತ್ರಗಳಿಗೆ ಪ್ರಬಲ ಅಭ್ಯರ್ಥಿಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಕೆಲವು ಕಡೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಲಾಗಿದೆ. ಈಗ ಬಿಜೆಪಿ 28 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡುವವರೆಗೂ ಕೈಪಡೆ ಕಾಯಲಿದೆ. ಹೀಗಾಗಿ ಎರಡು ಪಟ್ಟಿ ಬಿಡುಗಡೆ ಮಾಡಲಿರುವ ಕಾಂಗ್ರೆಸ್, ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಲು ವಿಳಂಬ ಮಾಡಲಿದೆ