ಉಡುಪಿ: ಸರಕಾರ ಉಚಿತ ಗ್ಯಾರಂಟಿ ಯೋಜನೆಯಂತೆ ಮದ್ಯಪ್ರಿಯರಿಗೂ ಉಚಿತ ಮದ್ಯ ನೀಡಬೇಕೆಂದು ಮದ್ಯಪ್ರಿಯರು ಸರಕಾರವನ್ನು ಒತ್ತಾಯಿಸಿದ್ದರು. ಉಚಿತ ಮದ್ಯಕ್ಕಾಗಿ ಆಗ್ರಹಿಸಿ ಉಡುಪಿ ನಾಗರಿಕ ಸಮಿತಿ ನೇತೃತ್ವದಲ್ಲಿ ಮದ್ಯಪ್ರಿಯರು ನಗರದ ಚಿತ್ತರಂಜನ್ ವೃತ್ತದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು. ಮದ್ಯದ ಬಾಟಲಿಗೆ ಹೂಗಳಿಂದ ಅಲಂಕರಿಸಿ, ಆರತಿ ಬೆಳಗಿ, ಡೋಲು ಬಡಿದು ಸರಕಾರದ ಗಮನ ಸೆಳೆದರು.
ಬಳಿಕ ಮಾತನಾಡಿದ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು, ಸರಕಾರ ಉಚಿತ ಯೋಜನೆ ಮಾದರಿಯಲ್ಲಿ ಮದ್ಯಪ್ರಿಯರಿಗೂ ಬೆಳಿಗ್ಗೆ 90 ಎಂಎಲ್, ಸಂಜೆ 90 ಎಂಎಲ್ ಮದ್ಯ ಉಚಿತವಾಗಿ ನೀಡಬೇಕು. ಸರಕಾರಕ್ಕೆ ಹೆಚ್ಚು ಆರ್ಥಿಕ ಬಲ ನೀಡುವುದೇ ಮದ್ಯಪ್ರಿಯರು. ಆದರೆ, ಮದ್ಯ ಸೇವಿಸಿ ಸರಕಾರಕ್ಕೆ ಆರ್ಥಿಕ ಬಲ ನೀಡುತ್ತಿರುವ ಮದ್ಯಪ್ರಿಯರಿಗೆ, ಬಜೆಟ್ ನಲ್ಲಿ ಮದ್ಯದ ಬೆಲೆ ಏರಿಕೆ ಮಾಡಿ ಸರಕಾರ ಅನ್ಯಾಯ ಮಾಡಿದೆ ಆಕ್ರೋಶ ವ್ಯಕ್ತಪಡಿಸಿದರು.
ಮದ್ಯ ವ್ಯಸನಿಗಳಿಂದಲೇ ಸರ್ಕಾರದ ಬೊಕ್ಕಸ ತುಂಬುತ್ತಿದೆ. ಮದ್ಯದ ಬೆಲೆ ಏರಿಕೆಯಿಂದ ಕೂಲಿ ಕಾರ್ಮಿಕರು ಮದ್ಯ ಸೇವಿಸಲು ಅಸಹಾಯಕ ಪರಿಸ್ಥಿತಿ ಎದುರಿಸುವಂತಾಗಿದೆ. ಸರ್ಕಾರವು ಉಚಿತ ಭಾಗ್ಯಗಳನ್ನು ನೀಡಿದಂತೆ ಕಾರ್ಮಿಕ ವರ್ಗದವರಿಗೆ ಉಚಿತ ಮದ್ಯವನ್ನು ನೀಡುವ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಮದ್ಯಪ್ರಿಯರು ಒತ್ತಾಯ ಮಾಡಿದರು.
