ಬೆಳ್ತಂಗಡಿ: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಕಾಯಿಲೆಯಿಂದ ನಿನ್ನೆ ನಿಧನರಾಗಿದ್ದಾರೆ. ಇಂದು ನೆಲಮಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತಾ ಕಾರ್ಯ ನಡೆಯುತ್ತಿದೆ.
ಹಿಂದೂ ಸಂಪ್ರದಾಯದಂತೆ ನಟಿ ಲೀಲಾವತಿ ಅಂತ್ಯಕ್ರಿಯೆ ನಡೆಯಲಿದೆ. ಪುತ್ರ ವಿನೋದ್ ರಾಜ್ಯ ಸೂಚನೆಯಂತೆ ಆಪ್ತರ ಸಮ್ಮುಖದಲ್ಲಿ ಬೆಳಗ್ಗೆಯೇ ಜೆಸಿಬಿ ಬಳಸಿ ಫಾರ್ಮ್ ಹೌಸ್ ನಲ್ಲಿ ಸಮಾಧಿ ತೆಗೆಯುವ ಕಾರ್ಯ ಆರಂಭವಾಗಿದೆ. ಅತ್ತ ಫಾರ್ಮ್ ಹೊರ ಭಾಗದಲ್ಲೂ ಗಣ್ಯರು, ಸಾರ್ವಜನಿಕರಿಗೆ ಅಂತಿಮ ದರ್ಶನ ವ್ಯವಸ್ಥೆ ಮಾಡಲು ಪೊಲೀಸರಿಂದಲೂ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ಸಿದ್ಧತೆ ನಡೆಸಿದ್ದಾರೆ.
ಬೆಳ್ತಂಗಡಿಯಿಂದ ಸಿನಿ ಲೋಕದ ಪಯಣ: ಬೆಳ್ತಂಗಡಿ ತಾಲೂಕಿನ ನಾವೂರ ಗ್ರಾಮದ ಮುರದಲ್ಲಿ ಜನಿಸಿದ ಲೀನಾ ಸಿಕ್ವೇರಾ ಅವರೇ ಇಂದು ಲೀಲಾವತಿಯಾಗಿ ಕನ್ನಡ ಸಿನೆಮಾ ಅಚ್ಛಳಿಯದ ಛಾಪು ಮೂಡಿಸಿದವರು. ಲೀಲಾವತಿಯವರ ಮೂಲ ಹೆಸರು ಲೀನಾ ಸಿಕ್ವೇರಾ. ಅವರ ಸಹೋದರಿ ಅಂಜಲಿನಾ ಸಿಕ್ವೇರಾ. ಬಾಲ್ಯದಲ್ಲೇ ತಂದೆಯನ್ನು ಕಳೆದು ಕೊಂಡ ಅವರನ್ನು ದೊಡ್ಡಪ್ಪನ ಮಗಳಾದ ಲೂಸಿ ಸಿಕ್ವೇರಾ ಸಹೋದರಿ ಲೀನಾ ಮತ್ತು ಅಂಜಲಿನಾ ಅವರನ್ನು ಸಲಹುತ್ತಿದ್ದರು. ಬಾಲ್ಯದಲ್ಲೇ ಉತ್ತಮ ನೃತ್ಯ ಪಟುವಾಗಿದ್ದ ಸಹೋದರಿಯರು ಜೀವನೋ ಪಾಯಕ್ಕಾಗಿ ನೃತ್ಯ ತರಬೇತಿ ನೀಡುತ್ತಿದ್ದರಂತೆ. ಲೀನಾ ಯಾನೆ ಲೀಲಾವತಿಗೆ ಎಲ್ಲು, ಲಿಲ್ಲಿ ಎಂಬ ಉಪನಾಮವೂ ಇದೆ ಎಂಬುದು ಅವರ ಜತೆಗೆ ಬಾಲ್ಯ ಕಳೆದ ನಾವೂರಿನ ಅಣ್ಣಿ ಮೂಲ್ಯ ಮತ್ತು ಕರ್ಮಿನಾ ಡಿ’ಸಿಲ್ವಾ ಹೇಳುತ್ತಾರೆ.
ಅಂದು ಮುರ ಮನೆಯಿಂದ 100 ಮೀಟರ್ ದೂರದ ನಾಲ್ಕನೇ ತರಗತಿವರೆಗಿದ್ದ ಸರಕಾರಿ ಶಾಲೆಯಲ್ಲೇ ಅವರ ಬಾಲ್ಯದ ವಿದ್ಯಾಭ್ಯಾಸ ಪೂರ್ಣಗೊಂಡಿತ್ತು. ಲಾೖಲದಿಂದ ಕಾಜೂರು ಕೊಲ್ಲಿ ಸಾಗುವ ಹೆದ್ದಾರಿ ಬದಿಯಲ್ಲಿದ್ದ ಮುಳಿಹುಲ್ಲಿನ ಮನೆಯಲ್ಲಿ ಅಕ್ಕ ತಂಗಿ ವಾಸವಾಗಿದ್ದರು. ಆರಂಭದಲ್ಲಿ ಬೆಳ್ತಂಗಡಿ ಚರ್ಚ್‌ಗೆ ತೆರಳುತ್ತಿದ್ದ ಅವರು 1955ರಲ್ಲಿ ಇಂದ ಬೆಟ್ಟು ಚರ್ಚ್ ನಿರ್ಮಾಣವಾದ ಬಳಿಕ ಅಲ್ಲಿಗೇ ಹೋಗುತ್ತಿದ್ದರು. ಬಾಲ್ಯದಿಂದಲೇ ಬಹಳಷ್ಟು ಚುರುಕುತನದ ಸಹೋದರಿಯರನ್ನು ಕಂಡು ಅಲ್ಲಿನ ಮುಸಲ್ಮಾನರೊಬ್ಬರು ಅವರನ್ನು 1963ರಲ್ಲಿ ಮಂಗಳೂರಿನ ಪಡೀಲಿಗೆ ಕಳುಹಿಸಿದ್ದರು. ಅಂದು ಲೀನಾ ಸಿಕ್ವೇರಾ ಯಾನೆ ಲೀಲಾವತಿ ಅವರಿಗೆ 16-17ರ ಹರೆಯ. ಅದಾ ದ ಬಳಿಕ ಹುಟ್ಟೂರಿಗೂ ಅವರಿಗೂ ಸಂಪರ್ಕ ಅಷ್ಟ ಕ್ಕಷ್ಟೆ. ಮತ್ತೆ ಅವರು ಪ್ರವೇಶಿಸಿದ್ದು ಸಿಲಿಕಾನ್ ಸಿಟಿಗೆ. ಮತ್ತೆ ಸಿನೆಮಾದಲ್ಲಿ ಸಾಧನೆ ಎಲ್ಲರಿಗೂ ಚಿರಪರಿಚಿತ.
ಇವರ ಸಹೋದರಿ ಅಂಜಲಿನಾ ಸಿಕ್ವೆರಾ ವೃತ್ತಿಯಲ್ಲಿ ಶಿಕ್ಷಕಿ. ಅವರು ಈ ಹಿಂದೆಯೇ ಮೃತಪಟ್ಟಿದ್ದಾರೆ. ಇವರ ದೊಡ್ಡಪ್ಪನ ಮಗಳು (ಸಹೋದರಿ) ಲೂಸಿ ಸಿಕ್ವೇರಾ (93) ವೇಣೂರಿನ ನಿಟ್ಟಡೆ ಗ್ರಾಮದ ಬೆರ್ಕಳದಲ್ಲಿ ವಾಸವಾಗಿದ್ದಾರೆ. ಲೀಲಾವತಿ ಯವರು ವಾಸಿಸಿದ್ದ ನಾವೂರಿನ ಮುರದಲ್ಲಿದ್ದ ಮನೆ ಮಾರಾಟವಾದ ಬಳಿಕ ಪ್ರಸಕ್ತ ಮುಸಲ್ಮಾನ ಕುಟುಂಬವೊಂದು ಖರೀದಿಸಿ ವಾಸಿಸುತ್ತಿದೆ.