ಮಂಗಳೂರು: ಹಿರಿಯ ವಕೀಲ, ನಗರದ ಬಿಜೈ ಕುಂಟಿಕಾನ ನಿವಾಸಿ ಬಿ.ಹರೀಶ್ ಆಚಾರ್ಯ (65) ತನ್ನ ಮನೆಯ ಮೆಟ್ಟಿಲಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕುಂಟಿಕಾನ ಕೆಎಸ್ಸಾರ್ಟಿಸಿ ಡಿಪೋ ಹಿಂಭಾಗದಲ್ಲಿರುವ ಹಳೆಕಾಲದ ಮಂದಿಯ ಮನೆಯಲ್ಲಿ ಹರೀಶ್ ಆಚಾರ್ಯ, ಒಬ್ಬಂಟಿಯಾಗಿ ವಾಸವಿದ್ದರು. ದಿನವೂ ಕೋರ್ಟಿಗೆ ಬರುತ್ತಿದ್ದ ಅವರು ಸಿವಿಲ್ ವಕೀಲರಾಗಿ ಪ್ರಸಿದ್ಧಿ ಪಡೆದಿದ್ದರು. ಅಲ್ಲದೆ, ಕಿರಿಯ ವಕೀಲರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಶುಕ್ರವಾರ ಎಂದಿನಂತೆ ಕೋರ್ಟಿಗೆ ಬಂದು ತೆರಳಿದ್ದ ಅವರು ಸೋಮವಾರ ಕೋರ್ಟಿಗೆ ಬಂದಿರಲಿಲ್ಲ. ಫೋನ್ ಮಾಡಿದಾಗ, ಸ್ವೀಕರಿಸುತ್ತಿರಲಿಲ್ಲ. ಮಂಗಳವಾರ ಬೆಳಗ್ಗೆಯೂ ಓರಗೆಯವರು ಕರೆ ಮಾಡಿದ್ದಾರೆ. ಫೋನ್ ಸ್ವೀಕರಿಸದೇ ಇದ್ದುದರಿಂದ ಮನೆಗೆ ತೆರಳಿ ನೋಡಿದ್ದಾರೆ.
ಮನೆಯ ಹೊರಗಡೆ ಗೇಟಿನಲ್ಲೇ ಎರಡು ದಿನಗಳ ಪತ್ರಿಕೆ ಇತ್ತು. ಮನೆಗೆ ಒಳಗಿನಿಂದ ಬೀಗ ಹಾಕಿತ್ತು. ಹೊರಗಡೆ ನಿಲ್ಲಿಸಿದ್ದ ಕಾರು ಹಾಗೆಯೇ ಇತ್ತು, ಹರೀಶ್ ಆಚಾರ್ಯರು ಮನೆಯ ಒಳಗೇ ಇರಬೇಕೆಂದು ವಕೀಲ ಗೆಳೆಯರು ಉರ್ವಾ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬಂದು ಮನೆಯ ಬಾಗಿಲು ಒಡೆದು ನೋಡಿದಾಗ, ಟಿವಿ ಚಾಲೂ ಸ್ಥಿತಿಯಲ್ಲಿತ್ತು. ಹರೀಶ್ ಆಚಾರ್ಯ ಮನೆಯ ಒಳಗಿಂದ ಮೇಲೆ ಹೋಗುವ ಮೆಟ್ಟಲಲ್ಲಿ ಕುಳಿತ ಸ್ಥಿತಿಯಲ್ಲೇ ಸಾವನ್ನಪ್ಪಿದ್ದರು. ದೇಹ ಕೊಳೆತು ವಾಸನೆ ಬರುತ್ತಿದ್ದುದರಿಂದ ಎರಡು ದಿನಗಳ ಹಿಂದೆಯೇ ಮೃತಪಟ್ಟಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಶನಿವಾರ ರಾತ್ರಿ ಅಥವಾ ಭಾನುವಾರ ಬೆಳಗ್ಗೆ ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹರೀಶ್ ಆಚಾರ್ಯ ಅವರ ತಂದೆಯೂ ಮಂಗಳೂರಿನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. ಮನೆಯಲ್ಲಿ ಮಗನ ಜೊತೆಗೇ ವಾಸವಿದ್ದರು. ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ತಂದ ತೀರಿಕೊಂಡಿದ್ದರು. ಹರೀಶ್ ಅವರಿಗೆ ಮದುವೆಯಾಗಿದ್ದು, ತುಂಬ ವರ್ಷಗಳ ಹಿಂದೆಯೇ ಪತ್ನಿಯಿಂದ ದೂರವಿದ್ದು ಮನೆಯಲ್ಲಿ ಒಬ್ಬಂಟಿಯಾಗಿಯೇ ಇದ್ದರು. ಊಟ, ತಿಂಡಿ ಎಲ್ಲವೂ ಹೊರಗಿನಿಂದಲೇ ಮಾಡುತ್ತಿದ್ದರು. ಕೋರ್ಟಿನಲ್ಲಿ ತನ್ನ ಓರಗೆಯವರ ಜೊತೆಗೆ ಚಹಾ ಕುಡಿಯುತ್ತಿದ್ದರು. ಹೀಗಾಗಿ ಹರೀಶಣ್ಣ ಯಾಕೆ ಬಂದಿಲ್ಲ ಎಂದು ಸಹವರ್ತಿಗಳು ಸೋಮವಾರ ತಲೆಕಡಿಸಿಕೊಂಡಿದ್ದರು. ಮಂಗಳವಾರ ಬೆಳಗ್ಗೆ ಹರೀಶಣ್ಣ ಅನಾಥರಾಗಿ ಸಾವನ್ನಪ್ಪಿದ ವಿಚಾರ ತಿಳಿದ ಇತರೇ ವಕೀಲರು ಮನೆಗೆ ತೆರಳಿ ನೋಡಿದ್ದಾರೆ.
ಸದ್ಯ ಪೊಲೀಸರು ಅವರ ಶವವನ್ನು ವನಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ. ಅಲ್ಲದೆ, ಅವರಿಗೆ ಸಂಬಂಧಪಟ್ಟ ವಾರೀಸುದಾರರು ಇದ್ದರೆ ಶವ ಕೊಂಡೊಯ್ಯಬಹುದು ಎಂದು ಪ್ರಕಟಣೆ ನೀಡಿದ್ದಾರೆ. ಹರೀಶ್ ಆಚಾರ್ಯ ಮೊದಲಿನಿಂದಲೂ ಮಂಗಳೂರಿನ ಕುಂಟಿಕಾನದಲ್ಲಿಯೇ ಇದ್ದವರಾಗಿದ್ದು, ಅದೇ ಪರಿಸರದಲ್ಲಿ ಹಳೆ ತಲೆಮಾರಿನ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಮನೆ, ಜಾಗ ಇದೆ, ಆದರೆ ಯಾರಾದರೂ ಸಂಬಂಧಿಕರು ಇದ್ದಾರೆಯ ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.