ಮಣಿಪಾಲ: ಕೆಎಫ್ ಸಿ ಬಳಿ ಮಣಿಪಾಲ-ಉಡುಪಿ ರಾಷ್ಟ್ರೀಯ ಹೆದ್ದಾರಿ 169ಎ ರಲ್ಲಿ ಗುಡ್ಡ ಕುಸಿತ ಉಂಟಾಗಿದೆ. ನಿರಂತರ ಮಳೆಯಿಂದ ಮಣ್ಣು ಹದಗೊಂಡು ಗುಡ್ಡ ಜರಿದಿದೆ. ಗುಡ್ಡದ ಮೇಲೆ ಕಟ್ಟಡಗಳಿರುವುದರಿಂದ ಆತಂಕ ಸೃಷ್ಟಿಯಾಗಿದೆ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ವಾಹನ ಸವಾರರಿಗೂ ಭೀತಿ ಉಂಟಾಗಿದೆ.
ನಿನ್ನೆಯಿಂದ ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಪ್ರದೇಶದ ಕೆಳಭಾಗದಲ್ಲಿ ಸಿನಿಮಾ ಥಿಯೇಟರ್ ಸೇರಿದಂತೆ ಹಲವು ಕಟ್ಟಡಗಳಿದ್ದು ಈ ಹಿಂದೆ ಆಪ್ರದೇಶದಲ್ಲಿ ಗುಡ್ಡ ಕುಸಿತವಾಗಿರುವದನ್ನು ನೆನಪಿಸಿಕೊಳ್ಳಬಹುದು. ಗುಡ್ಡ ಪ್ರದೇಶದ ಮುರಕಲ್ಲು ಹೊಂದಿದ್ದು ಒಳಭಾಗದಲ್ಲಿ ಶೇಡಿಮಣ್ಣು ಇರುವ ಕಾರಣ ಮೇಲ್ಮಣ್ಣು ಕೊಚ್ಚಿಹೋದಲ್ಲಿ ಸಮಸ್ಯೆಯಾಗಲಿದೆ. ರಸ್ತೆ ಇಳಿಜಾರಿನಲ್ಲಿಯೇ ಗುಡ್ಡ ಕುಸಿತವಾಗಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.