Site icon newsroomkannada.com

ಮುಸ್ಲಿಂ ವ್ಯಕ್ತಿಯ ಮೊಬೈಲ್ ಅಂಗಡಿಯಲ್ಲಿ ಲಕ್ಷ್ಮಿ ಪೂಜೆ: ಭಾವೈಕ್ಯತೆ ಸಾರಿದ ಯುವಕ

ಶಿವಮೊಗ್ಗ: ನಾಡಿನೆಲ್ಲೆಡೆ ಲಕ್ಷ್ಮಿ‌ ಪೂಜೆ ಹಾಗೂ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಸೌಹಾರ್ದತೆ ಕಾರಣಕ್ಕೆ ಹಿಂದೂಗಳ ಹಬ್ಬವನ್ನು ಮುಸ್ಲಿಮರೂ ಹಾಗೂ ಮುಸ್ಲಿಮರ ಹಬ್ಬವನ್ನು ಹಿಂದೂಗಳು ಆಚರಿಸುವುದನ್ನು ಅಲ್ಲಲ್ಲಿ ನೋಡಿದ್ದೇವೆ. ಅದೇ ಮಾದರಿಯ ಸುದ್ದಿಯೊಂದು ಶಿವಮೊಗ್ಗದಲ್ಲಿ ವರದಿಯಾಗಿದೆ.

ಹಿಂದೂಗಳು ಸಂಭ್ರಮದಿಂದ ಆಚರಿಸುವ ಹಬ್ಬ ದೀಪಾವಳಿ. ಈ ಹಬ್ಬದಲ್ಲಿ ಲಕ್ಷ್ಮಿ ಪೂಜೆ ಸಹ ಇರುತ್ತದೆ. ಮುಸ್ಲಿಂ ಯುವಕನೋರ್ವ ತನ್ನ ಮೊಬೈಲ್ ಅಂಗಡಿಯಲ್ಲಿ ಲಕ್ಷ್ಮಿ ಪೂಜೆ ಮಾಡಿರುವ ಪ್ರಸಂಗ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ನಡೆದಿದೆ.

ಮುಸ್ಲಿಂ ಯುವಕ ಹಾಗೂ ಆತನ ಸ್ನೇಹಿತರು ಹಿಂದೂ ಸಂಪ್ರದಾಯದಂತೆ ಲಕ್ಷ್ಮಿ ಪೂಜೆ ನೆರವೇರಿಸಿದ್ದಾರೆ. ತನ್ವೀರ್ ಎಂಬ ಯುವಕ ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿರುವ ತನ್ನ ಮೊಬೈಲ್ ಅಂಗಡಿಯಲ್ಲಿ ಪ್ರತಿವರ್ಷ ಹಿಂದೂ ಸಂಪ್ರದಾಯದಂತೆ ಕಳಸ ಇರಿಸಿ, ಹಣ್ಣು-ಕಾಯಿ ನೈವೇದ್ಯ ಅರ್ಪಿಸುವ ಮೂಲಕ ಪುರೋಹಿತರಿಂದ ಪೂಜೆ ನೆರವೇರಿಸಿದ್ದಾರೆ.

ತನ್ವೀರ್‌ ಹಿಂದಿನಿಂದಲೂ ದೀಪಾವಳಿಯಂದು ತಮ್ಮ ಅಂಗಡಿಯಲ್ಲಿ ಲಕ್ಷ್ಮಿ ಪೂಜೆ ನೆರವೇರಿಸುತ್ತಾ ಬಂದಿದ್ದಾರಂತೆ. ಅಲ್ಲದೇ ಮುಸ್ಲಿಂ ಧರ್ಮ ಗುರುಗಳಿಂದ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಹಲವಾರು ವರ್ಷಗಳಿಂದ ಭಾವೈಕ್ಯತೆ ಸಾರುತ್ತಿದ್ದಾರೆ.

Exit mobile version