ಚಿಕ್ಕಮಗಳೂರು: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಮತ್ತಷ್ಟು ವಿಳಂಬ ಆಗುತ್ತದೆ. ಬಹಳ ಸರಳವಾಗಿ ಗೃಹಲಕ್ಷ್ಮೀ ಯೋಜನೆ ಜನರಿಗೆ ತಲುಪಬೇಕೆಂದು ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಅಧಿಕಾರಿಗಳಿಗೆ ಕೆಲ ಬದಲಾವಣೆ ಮಾಡಲು ಸೂಚನೆ ನೀಡಿದ್ದೇವೆ. ಮೊದಲು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದೀಗ ಇದರ ಜೊತೆಗೆ ಗ್ರಾಮ ಪಂಚಾಯಿತಿಯಲ್ಲಿನ ಬಾಪೂಜಿ ಸೇವಾ ಕೇಂದ್ರದಲ್ಲೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ಅರ್ಜಿ ಸಲ್ಲಿಸಲು ವಿಳಂಬವಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸರ್ಕಾರದ ಯೋಜನೆಯನ್ನ ಯಾರು ಮನೆ ಮನೆಗೆ ಮುಟ್ಟಿಸಲು ಪ್ರಜಾ ಪ್ರತಿನಿಧಿ ಆರಂಭಿಸುತ್ತಿದ್ದೇವೆ. ಈಗಾಗಲೆ ಅಧಿಕಾರಿಗಳು ಸಾಫ್ಟ್ವೇರ್/ಅಪ್ಲಿಕೇಶನ್ ಅನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಅತ್ಯಂತ ಶೀಘ್ರದಲ್ಲೇ ಅರ್ಜಿ ಪ್ರಕ್ರಿಯೆ ಆರಂಭವಾಗುತ್ತದೆ. ಆಗಸ್ಟ್ 17 ಅಥವಾ 18ರಂದು ಮನೆ ಯಜಮಾನಿ ಖಾತೆಗೆ ಹಣ ತಲಪುತ್ತದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲೆಯ ಕೊಪ್ಪ ತಾಲೂಕಿನ ವಿನಯ ಗುರೂಜಿ ಅವರ ಗೌರಿಗದ್ದೆ ಆಶ್ರಮದಲ್ಲಿ ಮಳೆಗಾಗಿ ಚಂಡಿಕಾಯಾಗ ನಡೆಸಿದರು. ಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಸಚಿವ ಡಿ.ಸುಧಾಕರ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಶಾಸಕರು ಭಾಗಿಯಾಗಿದ್ದರು.