ಮಂಗಳೂರು: ಸಾಧಿಸುವ ಛಲವೊಂದಿದ್ದರೆ ಸಾಧನೆಗೆ ಹಲವು ಮಾರ್ಗಗಳಿವೆ ಎಂಬುದಕ್ಕೆ ಉದಾಹರಣೆ ಮೂಡುಶೆಡ್ಡೆಯ ಸಾಹಸಿ ಮಹಿಳಾ ಉದ್ಯಮಿ ಲಕ್ಷ್ಮಿ ಚಿದಾನಂದ ಆಚಾರ್ಯ ಉತ್ತಮ ಉದಾಹರಣೆ. ಪತಿಗೆ ಆರ್ಥಿಕವಾಗಿ ಬೆಂಬಲ ನೀಡಬೇಕೆಂಬ ಉದ್ದೇಶದಿಂದ ಆರಂಭಿಸಿದ ಹೋಳಿಗೆ ಉದ್ಯಮ ಇಂದು ನಾಲ್ಕಾರು ಮಂದಿಗೆ ಉದ್ಯೋಗ ನೀಡುವ ಸಂಸ್ಥೆಯಾಗಿ ರೂಪುಗೊಂಡಿದ್ದು, ಪ್ರತಿ ಮಹಿಳೆಯುರಿಗೂ ಮಾದರಿಯಾಗಿದೆ.
2017ರಲ್ಲಿ ಆರಂಭ: ಮನೆಯಲ್ಲಿದ್ದ ಆರ್ಥಿಕ ಸಂಕಷ್ಟದ ಕಾರಣದಿಂದ ಸಣ್ಣ ಮಟ್ಟದಲ್ಲಿ ಲಕ್ಷ್ಮಿ ಆಚಾರ್ಯ 2017ರಲ್ಲಿ ಬೇಳೆ ಮತ್ತು ಕಾಯಿ ಹೋಳಿಗೆ ಉದ್ಯಮವನ್ನು ಲಕ್ಮಿ ಆಚಾರ್ಯ ಮಗನ ಹೆಸರಿನಲ್ಲಿ ಆರಂಭಿಸಿದ್ದರು. ಆರಂಭದಲ್ಲಿ ಸ್ವತಃ ಅವರೊಬ್ಬರೇ ಮನೆಯಲ್ಲಿ ಹೋಳಿಗೆ ಮಾಡಿ ಅಂಗಡಿ ಅಂಗಡಿಗಳಿಗೆ ಲೈನ್ ಸೇಲ್ ಮಾಡುತ್ತಿದ್ದರು. ಅದರಲ್ಲಿ ಬಂದ ಹಣದಲ್ಲಿ ಮನೆ ಖರ್ಚು, ಮತ್ತು ಮಗುವಿನ ಆರೈಕೆಗೆ ಬಳಸಿಕೊಳ್ಳುತ್ತಿದ್ದರು. ಇವರ ಗೃಹ ಉದ್ಯಮಕ್ಕೆ ದೊಡ್ಡ ಮಟ್ಟದ ಬೂಸ್ಟ್ ಸಿಕ್ಕಿದ್ದು, ಪಿಲಿಕುಳದಲ್ಲಿ ಆಯೋಜನೆಯಾಗಿದ್ದ ತುಳುನಾಡ ಸಿರಿ ಕಾರ್ಯಕ್ರಮ.
ಪಿಲಿಕುಳ ಪರ್ಬದಲ್ಲಿ ನಾನು ಬೇಳೆ ಹೋಳಿಗೆ ಮಾಡಿ ಮಾರಾಟದ ಸ್ಟಾಲ್ ಮಾಡಿದ್ದೆ, ಅಲ್ಲಿ ನನಗೆ ಗ್ರಾಹಕರಿಂದ ತುಂಬಾ ಪಾಸಿಟಿವ್ ರೆಸ್ಪಾನ್ಸ್ ದೊರೆಯಿತು. ನಂತರ ಪಿಲಿಕುಳದವರೇ ಹಲಸು ಮೇಳದಲ್ಲಿ ಸ್ಟಾಲ್ ಹಾಕುವಂತೆ ಒತ್ತಾಯ ಮಾಡಿದರು. ಹಲಸು ಮೇಳದಲ್ಲಿ ಹಲಸು ಹಣ್ಣು, ಗಿಡ, ತಿಂಡಿಗಳ ಮಾರಾಟವಿರುತ್ತದೆ. ಅದೇ ರೀತಿ ಹಲಸಿನ ಹೋಳಿಗೆ ಮಾಡಿದ್ರೆ ಹೇಗೆ ಎಂಬ ಆಲೋಚನೆ ಮೂಡಿತು. ಆದರೆ ಅದನ್ನು ತಯಾರು ಮಾಡುವುದೇ ಹೇಗೆ ಎಂಬ ಚಿಂತೆ ಕಾಡಿತು. ಎರಡು ಮೂರು ಬಾರಿ ಟ್ರಯಲ್ ಬೇಸ್ ನಲ್ಲಿ ಮಾಡಿದ ಹಲಸಿನ ಹೋಳಿಗೆ ಫ್ಲಾಪ್ ಆಯಿತು. ಬಳಿಕ ಸತತ ಶ್ರಮದಿಂದ ಹೋಳಿಗೆ ಹೂರಣ ಸರಿಯಾದ ಹಂತಕ್ಕೆ ಬಂತು. ನಂತರ ನನ್ನ ಪತಿ ಹಲಸಿನ ಹೋಳಿಗೆ ತಯಾರಿಗೆ ಸಪೋರ್ಟ್ ಮಾಡಿದರು. ಬಳಿಕ ಹಲಸು ಹೋಳಿಗೆ ಸಕ್ಸಸ್ ಆಗಿ ಎಲ್ಲಕಡೆಯೂ ಜನರಿಂದ ಸೂಪರ್ ಅಂತ ಹೇಳಿಸಿಕೊಳ್ಳುವ ಮಟ್ಟಕ್ಕೆ ಬೆಳೆಯಿತು ಎಂದು ಯಶಸ್ಸಿನ ಸೂತ್ರವನ್ನು ಬಿಚ್ಚಿಡುತ್ತಾರೆ ಲಕ್ಷ್ಮಿ. ಮೊದಲು ಕೈಯಲ್ಲಿ ನಾನು ಹೋಳಿಗೆ ಮಾಡುತ್ತಿದ್ದೆ. ಆದರೆ ನಂತರ ಮರದ ಕೆಲಸ ಮಾಡುತ್ತಿದ್ದ ನನ್ನ ಪತಿ ಹೋಳಿಗೆ ಮಾಡುವ ಸಣ್ಣ ಒತ್ತುಮಣೆಯೊಂದನ್ನು ತಯಾರಿಸಿಕೊಟ್ಟರು. ನಾವು ಈ ಮೊದಲು ಹೋಳಿಗೆ ಲೈನ್ ಸೇಲ್ ಮಾಡುತ್ತಿದ್ದೆವು. ಈಗ ಕೃಷಿ ಮೇಳ, ಹಲಸು ಮೇಳದಲ್ಲಿ ಸ್ಟಾಲ್ ಮಾಡುತ್ತಿದ್ದೇವೆ. ಅದೇ ರೀತಿ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿಯೂ ಹಲಸಿನ ಹೋಳಿಗೆ ಮಳಿಗೆ ಮಾಡುತ್ತಿದ್ದೇವೆ. ಅಲ್ಲಿ ಉತ್ತಮ ಸ್ಪಂದನೆ, ಗ್ರಾಹಕರಿಂದ ಮೆಚ್ಚುಗೆ ದೊರೆತಿದೆ ಎಂದು ಖುಷಿಯಿಂದ ಹೇಳುತ್ತಾರೆ ಲಕ್ಷ್ಮಿ.
ಹಲಸಿನ ಹಣ್ಣು ಸಂಗ್ರಹ: ಇತರ ತರಕಾರಿ, ಹಣ್ಣುಗಳಂತೆ ಹಲಸು ಎಲ್ಲ ಕಾಲದಲ್ಲಿಯೂ ದೊರೆಯುವುದಿಲ್ಲ. ಅದಕ್ಕಾಗಿ ಹಲಸನ್ನು ಸಂಗ್ರಹ ಮಾಡುವುದು ಅಗತ್ಯ. ಫ್ರೀಜರ್ ನಲ್ಲಿ ಹಲಸಿನ ಹಣ್ಣನ್ನು ಸಂಗ್ರಹಿಸಿ ಹಲಸು ಇಲ್ಲದ ಕಾಲದಲ್ಲಿ ಅದನ್ನು ಹೋಳಿಗೆಗೆ ಬಳಕೆ ಮಾಡುತ್ತಾರೆ. ಅದಕ್ಕಾಗಿಯೇ ಫ್ರೀಜರ್ ಖರೀದಿ ಮಾಡಿದ್ದಾರೆ.
4 ಮಂದಿಗೆ ಕೆಲಸ: ಲಕ್ಷ್ಮಿ ಅವರು ಏಕಾಂಗಿಯಾಗಿ ಆರಂಭಿಸಿದ ಮಹಿಳಾ ಉದ್ಯಮ ಇಂದು ನಾಲ್ಕು ಮಂದಿಗೆ ಉದ್ಯೋಗ ನೀಡುವ ಹಂತಕ್ಕೆ ತಲುಪಿದೆ. ಅಲ್ಲದೆ ವಾಮಂಜೂರಿನಲ್ಲಿ ಬಿಸಿಬಿಸಿ ಹೋಳಿಗೆ ಎಂಬ ಹೆಸರಿನಲ್ಲಿಯೇ ಶಾಪ್ ಒಂದನ್ನು ತೆರೆದಿದ್ದಾರೆ. ಅಲ್ಲಿ ನೀವು ಲೈವ್ ಆಗಿಯೇ ಹೋಳಿಗೆ ತಯಾರಿ ನೋಡುತ್ತಾ. ಹೋಳಿಗೆ ಸವಿಯನ್ನು ಸವಿಯುವ ಅವಕಾಶವಿದೆ. ಅದೇ ರೀತಿ ಅಂಗಡಿಗೆ ಬಂದು ಹೋಳಿಗೆ ಖರೀದಿ ಮಾಡುವ ಜೊತೆಗೆ ಮದುವೆ, ಫಕ್ಷಂನ್ ಗಳ ಆರ್ಡರ್ ಕೂಡ ಅವರಿಗೆ ದೊರೆಯುತ್ತಿದೆ. ಅಲ್ಲದೆ ಖಾಸಗಿ ಕಾರ್ಯಕ್ರಮಗಳಲ್ಲಿಯೂ ಸ್ಥಳದಲ್ಲಿಯೇ ಹೋಳಿಗೆ ತಯಾರಿ ಮಾಡಿಕೊಡುತ್ತಿದ್ದಾರೆ.
ಶುಗರ್ ಫ್ರೀ ಹೋಳಿಗೆ: ಸಕ್ಕರೆ ಹೋಳಿಗೆಯನ್ನು ಜನರು ಇಷ್ಟಪಡುವುದಿಲ್ಲ. ನಾನು ತಯಾರು ಮಾಡುವ ಹೋಳಿಗೆಯನ್ನು ಜನರು ಲೈಕ್ ಮಾಡಲು ಮೊದಲ ಕಾರಣವೇ ಬೆಲ್ಲ ಬಳಕೆ ಮಾಡುತ್ತಿರುವುದು. ಒಂದು ಹೋಳಿಗೆಗಾಗಿ ಜನರು ಅರ್ಧ ಒಂದುಗಂಟೆ ಕ್ಯೂನಲ್ಲಿ ನಿಂತು ಖರೀದಿ ಮಾಡುತ್ತಾರೆ. ಹೋಳಿಗೆಯಲ್ಲಿ ಬೆಲ್ಲ ಬಳಕೆಯ ಒಂದೇ ಒಂದು ಕಾರಣಕ್ಕಾಗಿ ಈ ಕ್ಯೂ ಇರುತ್ತದೆ ಎಂದು ತಮ್ಮ ಉದ್ಯಮದ ಉತ್ತಮ ರಹಸ್ಯವನ್ನು ಬಿಚ್ಚಿಡುತ್ತಾರೆ ಲಕ್ಷ್ಮಿ.
ಲಕ್ಷ್ಮಿ ಅವರ ಹೋಳಿಗೆ ಉದ್ಯಮಕ್ಕೆ ಒಂದು ಗಂಟೆಯಲ್ಲಿ 400 ಹೋಳಿಗೆ ತಯಾರಿಸುವ ಸಾಮರ್ಥ್ಯವಿದೆ. ಆದರೆ 2 3 ಕಡೆ ಆರ್ಡರ್ ಬಂದಾಗ ಯಂತ್ರಗಳ ಸಹಾಯ ಅಗತ್ಯ ಈ ನಿಟ್ಟಿನಲ್ಲಿ ಹೋಳಿಗೆ ತಯಾರಿಗೆ ಯಂತ್ರಗಳನ್ನು ಖರೀದಿಸುವ ಬಗ್ಗೆ ಚಿಂತನೆಯಿದೆ ಎನ್ನುತ್ತಾರೆ ಲಕ್ಷ್ಮಿ ಆಚಾರ್ಯ. ಲಕ್ಷ್ಮಿ ಆಚಾರ್ಯ ಅವರು ಇದೀಗ ಪ್ರತಿ ತಿಂಗಳು 50 ಸಾವಿರ ರೂ. ವರೆಗೆ ಆದಾಯ ಗಳಿಸುತ್ತಿದ್ದಾರೆ. ಒಟ್ಟಿನಲ್ಲಿ ಕರಾವಳಿಯ ಮಹಿಳೆಯೊಬ್ಬರು ಹಲಸಿನಿಂದಲೂ ಜೀವನ ಕಟ್ಟಿಕೊಳ್ಳಲು ಸಾಧ್ಯ ಎಂಬುದನ್ನು ನಿರೂಪಿಸುವ ಮೂಲಕ ಉದ್ಯೋಗ ಸಿಕ್ಕಿಲ್ಲ ಎಂದು ಪ್ರತಿದಿನ ಚಿಂತೆಯಲ್ಲಿ ಕೊರಗುತ್ತಿರುವ ಸಾವಿರಾರು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.