ಅವರು ಆಕೆಯನ್ನು ಡ್ರಾಪ್ ಮಾಡಿದ್ದೆಲ್ಲಿಗೆ ಗೊತ್ತಾ?
ಛೇ ಹೀಗೊಂದು ದುರಂತ ಡ್ರಾಪ್ ಕಥೆ
ಬೆಂಗಳೂರು: ಪರಿಚಯಸ್ಥರು ಡ್ರಾಪ್ ಕೊಡುತ್ತೀವಿ ಎಂದಾಕ್ಷಣ ಹಿಂದು-ಮುಂದು ಯೋಚಿಸದೇ ಅವರೊಟ್ಟಿಗೆ ಹೋದರೆ ಬೀದಿ ಹೆಣವಾಗುವುದು ಗ್ಯಾರಂಟಿ.. ಸದ್ಯ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ತಮ್ಮ ಪ್ರಾಣವನ್ನೇ (Murder Case) ಕಳೆದುಕೊಂಡಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಲಕ್ಷ್ಮಿಪುರ ಗ್ರಾಮದ ನಿವಾಸಿ ಮಂಜುಳ ಮೃತ ರ್ದುದೈವಿ.
ಮಂಜುಳ ಟಿ.ದಾಸರಹಳ್ಳಿ ಸಮೀಪ ವೀಳ್ಯದೆಲೆ ವ್ಯಾಪಾರ ಮಾಡಿ, ಜೀವನ ಸಾಗಿಸುತ್ತಿದ್ದರು. ಊರ ಹಬ್ಬ ಎಂದು ಫೆಬ್ರವರಿ 11ರಂದು ಮಗಳ ಮನೆಗೆ ಹೊರಟ್ಟಿದ್ದರು. ಹೀಗೆ ಹೊರಟಿದ್ದ ಮಂಜುಳಾರನ್ನು ಬಸ್ ನಿಲ್ದಾಣದವೆರಗೂ ಡ್ರಾಪ್ ಮಾಡ್ತೀನಿ ಎಂದು ಜೀವನ್ ಎಂಬಾತ ಕರೆದಿದ್ದ. ಪರಿಚಯಸ್ಥನೇ ಕರೆದ ಕಾರಣಕ್ಕೆ ಆತನನ್ನು ನಂಬಿ ಮಂಜುಳ ಹೋಗಿದ್ದರು.
ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡದೆ, ನೇರ ಮನೆಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ಮಂಜುಳಾ ಮೈ ಮೇಲಿನ ಚಿನ್ನಾಭರಣವನ್ನು ಕಂಡೊಡನೇ ಜೀವನ್ ಹಾಗೂ ಪತ್ನಿ ಆಶಾಗೆ ದುರಾಸೆ ಮೂಡಿತ್ತು. ಹೀಗಾಗಿ ದಂಪತಿ ಇಬ್ಬರು ಸೇರಿ ಮಂಜುಳಾ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಕೊಲೆ ಬಳಿಕ ಶವವನ್ನು ಬೇರೆಡೆಗೆ ಸಾಗಿಸಲಾಗದೆ ಚೀಲದಲ್ಲಿ ತುಂಬಿ ರಾತ್ರಿ ವೇಳೆ ಮನೆಯ ನೀರಿನ ಸಂಪ್ನಲ್ಲಿ ಹಾಕಿದ್ದಾರೆ. ಬಳಿಕ ಚಿನ್ನಾಭರಣದೊಂದಿಗೆ ಇಬ್ಬರು ಎಸ್ಕೇಪ್ ಆಗಿದ್ದಾರೆ.
ಇತ್ತ ರಾತ್ರಿ ಕಳೆದರೂ ಮಂಜುಳ ಅವರು ಮಗಳ ಮನೆಗೆ ಹೋಗಲಿಲ್ಲವೋ ಕುಟುಂಬಸ್ಥರು ಗಾಬರಿಯಾಗಿದ್ದಾರೆ. ಎಲ್ಲ ಕಡೆ ಹುಡುಕಾಡಿದ ಬಳಿಕ ಮರುದಿನ ಅಂದರೆ ಫೆ.12ರಂದು ಮಂಜುಳಾರ ಪುತ್ರ ಸಂದೀಪ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲು ಮಾಡಿದ್ದರು.
ಇತ್ತ ಆರೋಪಿ ಜೀವನ್ ಹಾಗೂ ಆಶಾ ವಾಸವಿದ್ದ ಕಟ್ಟಡದ ಸಂಪಿನಿಂದ ದುರ್ವಾಸನೆ ಯುಕ್ತ ನೀರು ಬರಲು ಶುರುವಾಗಿತ್ತು. ಹೀಗಾಗಿ ಮನೆ ಮಾಲೀಕ ದೇವರಾಜ್ ಹಾಗೂ ಭಾಗ್ಯಮ್ಮ ನೀರಿನ ಸಂಪಿಗೆ ಏನಾದರೂ ಇಲಿ ಬಿದ್ದಿರಬಹುದಾ, ಕ್ಲೀನ್ ಮಾಡಿಸುವ ಎಂದು ತೆರೆದು ನೋಡಿದ್ದಾರೆ. ಆಗ ಸಂಪ್ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ಇದರಿಂದ ಗಾಬರಿಗೊಂಡ ಅವರು ಕೂಡಲೇ ಮಾದನಾಯಕನಹಳ್ಳಿ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಟ್ಟಡದಲ್ಲಿ ಯಾರೆಲ್ಲ ವಾಸವಿದ್ದಾರೆ ಎಂದು ವಿಚಾರಿಸಿದಾಗ, 2ನೇ ಮಹಡಿಯಲ್ಲಿದ್ದ ಆಶಾ ಹಾಗೂ ಜೀವನ್ ದಂಪತಿ ಕಾಣುತ್ತಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ ಪೊಲೀಸರು ದಂಪತಿಗೆ ಫೋನ್ ಮಾಡಿದಾಗ ಊರಲ್ಲಿ ಇರೋದಾಗಿ ಕಥೆ ಕಟ್ಟಿದ್ದಾರೆ. ದಿನ ಕಳೆದರೂ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ, ಮತ್ತೆ ಪೊಲೀಸರು ಮನೆ ಬಳಿ ಬನ್ನಿ ಸಣ್ಣ ವಿಚಾರಣೆ ಇದೆ ಎಂದಿದ್ದಾರೆ.
ಮರುಕ್ಷಣವೇ ಇಬ್ಬರೂ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಹೀಗಾಗಿ ನಾಪತ್ತೆಯಾಗಿರುವ ಇಬ್ಬರು ಆರೋಪಿಗಳೇ ಕೊಲೆಗಡುಕರು ಎಂದು ಗೊತ್ತಾಗಿದೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪರಿಚಯಸ್ಥರೆಂದು ನಂಬಿ ಹೋದ ಮಂಜುಳಾ ಅವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.