Site icon newsroomkannada.com

ಕೆವಿಜಿ ಕಲಹ: ಜೀವಾವಧಿ ಶಿಕ್ಷೆ ಬದಲು ಆಸ್ಪತ್ರೆಗೆ ದಾಖಲಾದ ರೇಣುಕಾಪ್ರಸಾದ್

ಮಂಗಳೂರು: ಕೆವಿಜಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ದಿವಂಗತ ಕುರುಂಜಿ ವೆಂಕಟರಮಣ ಗೌಡರ ಪುತ್ರ ರೇಣುಕಾಪ್ರಸಾದ್ ಅವರನ್ನು ಅನಾರೋಗ್ಯ ನೆಪದಲ್ಲಿ ವನ್ಹಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರೇಣುಕಾಪ್ರಸಾದ್ ಸೇರಿ ಐವರು ಆರೋಪಿಗಳಿಗೆ ಹೈಕೋರ್ಟ್‌ ಅ.5ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಮಂಗಳೂರಿನ ಜಿಲ್ಲಾ ಕೋರ್ಟಿನಲ್ಲಿ ಆರೋಪಿಗಳನ್ನು ವಿಡಿಯೋ ಕಾನ್ಸರೆನ್ಸ್ ಮೂಲಕ ಹೈಕೋರ್ಟ್‌ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಇನ್ನೊಬ್ಬ ಆರೋಪಿ ಆಕಾಶಭವನ್ ಶರಣ್ ಅನುಪಸ್ಥಿತಿಯಲ್ಲಿ ರೇಣುಕಾ ಸೇರಿ ಐವರು ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. ನಟೋರಿಯಸ್ ರೌಡಿಶೀಟರ್ ಶರಣ್ ಕೋರ್ಟಿಗೆ ಹಾಜರಾಗದೆ ತಪ್ಪಿಸಿಕೊಂಡಿದ್ದಾನೆ.

ಹೈಕೋರ್ಟಿನಿಂದ ಅಂದು ರಾತ್ರಿ 9 ಗಂಟೆ ವರೆಗೂ ವಾರಂಟ್ ಅದೇಶ ಬರದೇ ಇದ್ದುದರಿಂದ ಮಂಗಳೂರಿನ ಕೋರ್ಟ್ ಒಳಗಡೆಯೇ ರೇಣುಕಾ ಸೇರಿ ಐವರು ಆರೋಪಿಗಳನ್ನು ಇರಿಸಲಾಗಿತ್ತು. ಆನಂತರ, ರೇಣುಕಾ ಪ್ರಸಾದ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆರೋಗ್ಯ ತೊಂದರೆ ಇದೆಯೆಂದು ಹೇಳಿ ವೆಬ್ಲಾಕ್ ಜಿಲ್ಲಾಸ್ಪತ್ರೆಯಲ್ಲಿಯೇ ಇರಿಸಲಾಗಿತ್ತು. ಉಳಿದ ನಾಲ್ವರು ಆರೋಪಿಗಳನ್ನು ಮಂಗಳೂರಿನ ಸಬ್ ಜೈಲಿನಲ್ಲಿ ಹಾಕಲಾಗಿದೆ

ಈ ನಡುವೆ, ಅ.6ರಂದು ರೇಣುಕಾಪ್ರಸಾದ್ ನೋಡಿಕೊಂಡಿದ್ದ ಕೆವಿಜಿ ಪಾಲಿಟೆಕ್ನಿಕ್‌ ಕಾಲೇಜಿಗೆ ಕೆವಿಜಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆವಿ ಚಿದಾನಂದ ಮತ್ತು ಅವರ ಕುಟುಂಬ ಸದಸ್ಯರು ತೆರಳಿದ್ದು ಪ್ರಿನ್ಸಿಪಾಲ್ ಮತ್ತು ಇತರ ಸಿಬ್ಬಂದಿಯ ಮೊಬೈಲ್ ಕೇಳಿ ಶಿಕ್ಷಣ ಸಂಸ್ಥೆಯ ಎಲ್ಲ ದಾಖಲೆ ಪತ್ರಗಳನ್ನು ತಮಗೆ ಒಪ್ಪಿಸುವಂತೆ ಹೇಳಿದ್ದಾರೆ ಎನ್ನಲಾದ ಈ ಬಗ್ಗೆ ಸುಳ್ಯ ಠಾಣೆಯಲ್ಲಿ ರೇಣುಕಾಪ್ರಸಾದ್ ಪತ್ನಿ ಡಾ.ಜ್ಯೋತಿ ಅವರು ದೂರು ನೀಡಿದ್ದಾರೆ. ಅಲ್ಲದೆ, ಜ್ಯೋತಿ ಅವರು ಸುದ್ದಿಗೋಷ್ಟಿ ನಡೆಸಿದ್ದು ಈ ಹಿಂದೆಯೂ ನಾವು ಸಂಸ್ಥೆಯನ್ನು ಚೆನ್ನಾಗಿಯೇ ನೋಡಿಕೊಂಡು ಬಂದಿದ್ದೇವೆ. ಮುಂದೆಯೂ ಕಾಲೇಜು ಆಡಳಿತವನ್ನು ನೋಡಿಕೊಳ್ಳುತ್ತೇವೆ. ರೇಣುಕಾ ಅವರಿಗೆ ಶಿಕ್ಷೆ ಆಗಿರುವ ಬಗ್ಗೆ ನೋವಿದೆ. ನಾವದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡುತ್ತೇವೆ ಎಂದಿದ್ದಾರೆ.

Exit mobile version