Site icon newsroomkannada.com

ಮಂಡ್ಯದಿಂದ ಮತ್ತೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್!

ಮಂಡ್ಯ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ(Loksabha Elections 2024) ಜೆಡಿಎಸ್​, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಕ್ಷೇತ್ರವನ್ನು( Mandya Loksabha constituency) ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಹೀಗಾಗಿ ಹಾಲಿ ಸಂಸದೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲಯಾ ಅಂಬರೀಶ್​ಗೆ ಭಾರೀ ನಿರಾಸೆಯಾಗಿದೆ. ಇನ್ನು ಜೆಡಿಎಸ್​ನಿಂದು ಮಂಡ್ಯದಲ್ಲಿ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವ ಹಲವು ದಿನಗಳ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಈ ಬಾರಿ ಮತ್ತೆ ಮಂಡ್ಯ(Mandya) ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಸ್ಪರ್ಧಿಸುವುದು ಖಚಿತ ಎನ್ನಲಾಗಿದ್ದು, ಮಾರ್ಚ್ 25ರಂದು ಅಧಿಕೃತವಾಗಿ ಘೋಷಣೆಯಾಗಲಿದೆ. ಹೌದು…ನಿಖಿಲ್ ಕಣಕ್ಕಿಳಿಯುವ ಬಗ್ಗೆ ಪರೋಕ್ಷವಾಗಿ ಎಚ್​​ಡಿ ಕುಮಾರಸ್ವಾಮಿ(HD Kumaraswamy) ಖಚಿತಪಡಿಸಿದ್ದಾರೆ.

ಅಭ್ಯರ್ಥಿ ಆಯ್ಕೆ ಸಂಬಂಧ ಇಂದು (ಮಾರ್ಚ್ 15) ಮಂಡ್ಯದಲ್ಲಿ ಕುಮಾರಸ್ವಾಮಿ, ಜೆಡಿಎಸ್ ನಾಯರು, ಮುಖಂಡರ ಜೊತೆ ಸಭೆ ಮಾಡಿದ್ದು, ಸಭೆಯಲ್ಲಿ ಎಲ್ಲಾ ನಾಯಕರು ಕುಮಾರಸ್ವಾಮಿ ಇಲ್ಲ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಈ ವೇಳೆ ಮಾತನಾಡಿರುವ ಕುಮಾರಸ್ವಾಮಿ, ​ನಿಮಗೆ ನಿಖಿಲ್​ನನ್ನು ಒಪ್ಪಿಸಲು ಮುಂದಾಗುತ್ತೇನೆ. ನಿಮ್ಮ ಆಸೆಗೆ ನಾವು ಭಂಗ ತರಲ್ಲ. ಪುತ್ರ ನಿಖಿಲ್ ಕುಮಾರಸ್ವಾಮಿಗೂ ಒಂದು ಮಾತು ಹೇಳುತ್ತೇನೆ. ನಿಮ್ಮ ಭಾವನೆಗಳಿಗೆ ಯಾವುದೇ ಕಾರಣಕ್ಕೂ ನಿರಾಸೆಯಾಗಲ್ಲ. ನಿಮ್ಮ ಆಸೆಯ ಪ್ರಕಾರ ಅದನ್ನು ನೆರವೇರಿಸಿಕೊಳ್ಳುತ್ತೇನೆ. ಮಾರ್ಚ್ 21ಕ್ಕೆ ನನಗೆ ಆಪರೇಷನ್ ಇದೆ. ಆದ್ದರಿಂದ ಮಾರ್ಚ್ 25ರಂದು ಮಂಡ್ಯಕ್ಕೆ ಬಂದು ಅಭ್ಯರ್ಥಿ ಘೋಷಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಪರೋಕ್ಷವಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನೇ ಮಂಡ್ಯದಿಂದ ಕಣಕ್ಕಿಳಿಸುತ್ತೇನೆ ಎಂದು ಹೇಳಿದರು. ಇದರೊಂದಿಗೆ ಮಂಡ್ಯ ಜೆಡಿಎಸ್​ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಂತಾಗಿದೆ.

ಈ ಹಿಂದೆ ನಿಖಿಲ್‌ ಕುಮಾರಸ್ವಾಮಿ ಅವರು ಈ ಬಾರಿಯ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಅಭಿಮಾನಿಗಳು, ನಾಯಕರು ನಿಖಿಲ್‌ ಸ್ಪರ್ಧೆ ಮಾಡಬೇಕೆಂದು ಒಲವು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿ, ಪುತ್ರನನ್ನು ಕಣಕ್ಕಿಳಿಸುವ ತೀರ್ಮಾನ ಮಾಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದ್ದು, ಮಾರ್ಚ್ 25ರಂದು ಘೋಷಣೆ ಮಾಡಲಿದ್ದಾರೆ.

ಈ ಬಾರಿ ಮಂಡ್ಯದಿಂದ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಬೇಕು ಎಂದು ಜಿಲ್ಲೆಯ ಜೆಡಿಎಸ್​ ನಾಯಕರು ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಕುಮಾರಸ್ವಾಮಿ ಸ್ಪರ್ಧಿಸದಿದ್ದರೆ, ಅವರ ಮಗ ನಿಖಿಲ್​ ಕುಮಾರಸ್ವಾಮಿಯವರನ್ನಾದರೂ ಮಂಡ್ಯದಿಂದ ನಿಲ್ಲಿಸಬೇಕೆಂದು ಕಾರ್ಯಕರ್ತರು ಸಭೆಯಲ್ಲಿ ಒತ್ತಾಯಿಸಿದರು. ನಿಖಿಲ್ ಹಾಗೂ ಕುಮಾರಸ್ವಾಮಿ ಎಷ್ಟೇ ಮನವಿ ಮಾಡಿದರೂ ಕಾರ್ಯಕರ್ತರು ಮಾತ್ರ ಇಬ್ಬರಲ್ಲಿ ಒಬ್ಬರಾದರೂ ಸ್ಪರ್ಧಿಸಿ ಎಂದು ಪಟ್ಟು ಹಿಡಿದರು. ಇದಕ್ಕೆ ಮಾಜಿ ಸಚಿವರಾದ ಡಿಸಿ ತಮ್ಮಣ್ಣ ಹಾಗೂ ಪುಟ್ಟರಾಜು ಕೂಡ ಕಾರ್ಯಕರ್ತರ ಒತ್ತಾಯಕ್ಕೆ ಧ್ವನಿಗೂಡಿಸಿದರು. ನೀವು ಅಥವಾ ನಿಮ್ಮ ಮಗ ನಿಖಿಲ್​ರನ್ನ ನಿಲ್ಲಿಸಿ, ನಾವು ಗೆಲ್ಲಿಸಿಕೊಂಡು ಬರುತ್ತೇವೆ. ನಾಮಪತ್ರ ಸಲ್ಲಿಸಿ ಹೋಗಿ, ಉಳಿದಿದ್ದನ್ನು ನಾವು ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ಇನ್ನು ಈ ವೇಳೆ ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ, ಕುಮಾರಣ್ಣಗೆ ಇದೇ ತಿಂಗಳು ಮಾರ್ಚ್ 21 ರಂದು ಸರ್ಜರಿ ನಿಗದಿಯಾಗಿದೆ. ಸರ್ಜರಿ ಬಳಿಕ ಕುಮಾರಣ್ಣ ಹೆಚ್ಚು ಓಡಾಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡುವುದು ಎಂದು ಸ್ಪಷ್ಟಪಡಿಸಿದರು.

Exit mobile version