ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ದಿಶಾ ಸಮಿತಿ ಸಭೆ ನಡೆಯಿತು. ೨೦೨೩ ರ ಸಾಲಿನ ಡಿಸೆಂಬರ್ ತಿಂಗಳಲ್ಲಿ ಫ್ಲೈಓವರ್ ಕಾಮಗಾರಿ ಪೂರ್ಣವಾಗಲಿದೆ. ಈಗಾಗಲೇ ಫ್ಲೈಓವರ್ ಕಾಮಗಾರಿ ಶೇ. ೩೪ ಪೂರ್ಣಗೊಂಡಿದೆ. ಬಿಕರ್ನಕಟ್ಟೆ ಸಾಣೂರು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ ೧೬೯ ಕಾಮಗಾರಿ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಈ ಬಗ್ಗೆ ಗ್ರಾಮದಿಂದ ದಾವೆ ಹಾಕಿ ಆಕ್ಷೇಪಣೆ ಹಾಕಲಾಗಿದೆ. ಈ ಬಗ್ಗೆ ಸಭೆ ನಡೆಸಿ ಒಂದು ತಿಂಗಳ ಅವಧಿಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಕೂಳೂರು ಬ್ರಿಡ್ಜ್ ಕಾಮಗಾರಿ ಆರ್ಥಿಕ ತೊಂದರೆಯಿಂದ ನಿಧಾನವಾಗಿದೆ ಎಂಬ ಮಾಹಿತಿಯನ್ನುಅಧಿಕಾರಿಗಳು ನೀಡಿದರು. ಸಿಲಿಕಾ ಎಂಬ ಸಾಮಗ್ರಿ ಲಭ್ಯವಿಲ್ಲದೆ ಕಾಮಗಾರಿ ನಿಂತಿದೆ. ಈ ಬಗ್ಗೆ ಗುತ್ತಿಗೆದಾರರ ಸಭೆ ನಡೆಸಿ ಕಾಮಗಾರಿ ಆರಂಭಿಸುವಂತೆ ಸೂಚಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾರ್ವಜನಿಕರು ಹೋಗಲು ಹಿಂದೇಟು ವಿಚಾರವಾಗಿ ಮಾತನಾಡಿದ ಸಂಸದ ನಳಿನ್, ಬ್ಯಾಂಕುಗಳಲ್ಲಿ ಸಿಬ್ಬಂದಿಗಳಿಗೆ ಭಾಷೆಯ ಸಮಸ್ಯೆಯಿಂದ ಜನರು ಹೋಗದಂತಾಗಿದೆ. ಗ್ರಾಮೀಣ ಭಾಗದ ಬ್ಯಾಂಕ್ ಗಳಲ್ಲಿ ಸ್ಥಳೀಯ ಭಾಷೆ ಬಾರದವರೇ ಇರುತ್ತಾರೆ. ಈ ಬಗ್ಗೆ ಈ ಹಿಂದಿನ ಡಿಸಿಸಿ ಸಭೆಯಲ್ಲಿ ಸೂಚಿಸಲಾಗಿತ್ತು.
ಆದರೆ ಕೆಲವು ಬ್ಯಾಂಕುಗಳಲ್ಲಿ ಸ್ಥಳೀಯ ಭಾಷಾ ಸಿಬ್ಬಂದಿಗಳಿಲ್ಲದೆ ಕಷ್ಟಪಡುವಂತಾಗಿದೆ. ಹೊರ ರಾಜ್ಯಗಳ ಸಿಬ್ಬಂದಿಗಳಿಂದ ಜನರಿಗೆ ಸಂಪರ್ಕ ಕಷ್ಟ ಆಗುತ್ತಿದೆ. ಈ ಬಗ್ಗೆ ಪ್ರತೀ ಬ್ಯಾಂಕುಗಳಲ್ಲಿ ಸ್ಥಳೀಯ ಭಾಷೆ ಗೊತ್ತಿರುವ ಸಿಬ್ಬಂದಿ ನೇಮಕ ಮಾಡುವಂತೆ ಸಂಸದರು ಸೂಚಿಸಿದರು.
ಟೋಲ್ ಗೇಟ್ ತೆರವಿಗೆ ಸೂಚನೆ: ಟೋಲ್ ಸಂಗ್ರಹ ರದ್ದಾದರೂ ಸುರತ್ಕಲ್ ಟೋಲ್ ಗೇಟ್ ಅಸ್ತಿತ್ವದಲ್ಲಿದೆ. ಹೀಗಾಗಿ ಶೆಡ್ ಅನ್ನು ಶೀಘ್ರ ಒಡೆದು ಹಾಕುವಂತೆ ಸಂಸದರು ಸೂಚಿಸಿದರು.