ಬೆಂಗಳೂರು: ಉದ್ಯಮಿಗೆ ಬಹುಕೋಟಿ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಪೋಲಿಸರ ಬಲೆಗೆ ಬಿಳುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ ಜನರ ಸಂಭ್ರಮ ಮುಗಿಲು ಮುಟ್ಟಿತ್ತು. ಅಂದು ಚೈತ್ರಾ ಓಡಾಡಿದ್ದ ಜಾಗವನ್ನು ಗ್ರಾಮಸ್ಥರು ಸೇರಿ ತೀರ್ಥ ಹಾಕಿ ಶುದ್ಧ ಮಾಡಿದ ಘಟನೆ ಕೂಡ ನಡೆದಿದೆ.
ಹೌದು, ಕಳೆದ ವರ್ಷ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಚೈತ್ರಾ ಕುಂದಾಪುರ ಅವರು ಚಿಕ್ಕ ವಿಷಯವನ್ನ ದೊಡ್ಡದು ಮಾಡಿ ಭಾಷಣ ಮಾಡುವ ಮೂಲಕ ಗ್ರಾಮದಲ್ಲಿ ಎರಡು ಬಣಗಳ ನಡುವೆ ಗಲಾಟೆ ತಂದಿಟ್ಟಿದ್ದರಂತೆ. ಹೀಗಾಗಿ ಗ್ರಾಮ ದೇವರಿಗೆ ಚೈತ್ರಾ ವಿರುದ್ಧ ಪ್ರಾರ್ಥನೆ ಮಾಡಿ, ಒಂದು ವರ್ಷದೊಳಗೆ ಶಿಕ್ಷೆ ನೋಡುವಂತೆ ಗ್ರಾಮಸ್ಥರು ಪ್ರಾರ್ಥನೆ ಮಾಡಿದ್ದರು.
2022, ಅಕ್ಟೋಬರ್ 4 ರಂದು ‘ಹಿಂದೂ ಸಂಗಮ’ ಕಾರ್ಯಕ್ರಮ ನಡೆಸಲಾಗಿತ್ತು. ಕಾರ್ಯಕ್ರಮದ ದಿಕ್ಸೂಚಿ ಭಾಷಣಗಾರ್ತಿಯಾಗಿ ಚೈತ್ರ ಕುಂದಾಪುರ ಆಗಮಿಸಿದ್ದರು. ಈ ವೇಳೆ ಎರಡು ಕೋಮುಗಳ ನಡುವೆ ಗಲಾಟೆಯಾಗುವಂತಹ ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಅಂದೇ ಗ್ರಾಮಸ್ಥರು ಚೈತ್ರಾ ಭಾಷಣವನ್ನು ವಿರೋಧಿಸಿ ದೇವರಿಗೆ ಪ್ರಾರ್ಥನೆ ಮಾಡಿದ್ದರು.
ಇದೀಗ ಚೈತ್ರಾ ವಂಚನೆ ಪ್ರಕರಣದಲ್ಲಿ ಸಿಸಿಬಿ ಬಲೆಗೆ ಬಿಳುತ್ತಿದ್ದಂತೆ ದೇವರಿಗೆ ವಿಶೇಷ ಪೂಜೆ ನಡೆಸಿದ ಗ್ರಾಮಸ್ಥರು, ಹರಕೆ ತಿರಿಸಿದ್ದಾರೆ.