ಕೊಡಗು: ವೀರ ಯೋಧನಿಗೆ ನೀನೇ ನನ್ನ ಹೀರೋ, ನೀನೇ ನನ್ನ ಪ್ರೇರಣೆ ಎಂದು ಹೇಳಿಕೊಂಡು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡ ಸುಪನಾತಿ ಸುಬ್ಬಿ ಜೀವಿತಾ ಎನ್ನುವ ಕಿಲಾಡಿ ಲೇಡಿ ಪ್ರೀತಿಯ ನಾಟಕ ಹಾಗೂ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಸಾವಿಗೆ ಶರಣಾಗಿರುವ ದುರ್ಘಟನೆ ಕೊಡಗುನಲ್ಲಿ ನಡೆದಿದೆ.
ಮೃತ ಯೋಧನನ್ನು ಸಂದೇಶ್ ಎಂದು ಹೇಳಲಾಗಿದೆ. ಈತನಿಗೆ ವಂಚನೆ ಮಾಡಿದ ಹಾಗೂ ಸಾವಿಗೆ ಕಾರಣವಾದ ಮಹಿಳೆಯನ್ನು ಜೀವಿತಾ ಎಂದು ಗುರುತಿಸಲಾಗಿದೆ. ಮದುವೆಯಾಗಿದ್ದ ಯೋಧನನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡ ಯುವತಿ ಜೀವಿತಾ ಆತನೊಂದಿಗೆ ಸುತ್ತಾಟ ಮಾಡಿದ್ದಾಳೆ. ನಂತರ ಸಲುಗೆಯಿಂದ ಸರಸವಾಡುವ ಫೋಟೋ ಹಾಗೂ ದೃಶ್ಯವನ್ನು ಇಟ್ಟುಕೊಂಡು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಾ ಲಕ್ಷಾಂತರ ರೂ. ಹಣವನ್ನು ಕಿತ್ತುಕೊಂಡಿದ್ದಾಳೆ. ಆದರೆ, ಚಿನ್ನದ ಮೊಟ್ಟೆ ಇಡುವ ಕೋಳಿಯ ಹೊಟ್ಟೆ ಕೊಯ್ಯುವ ಕೆಲಸ ಮಾಡಿದಾಗ ಕೋಳಿಯೇ ಸತ್ತು ಹೋದಂತೆ, ಹಣವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಯೋಧನಿಗೆ ಏಕಾಏಕಿ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಾಗ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.