ಮಂಗಳೂರು: ರಸಪ್ರಶ್ನೆ ಸ್ಪರ್ಧೆ ಎಂದರೆ ಒಂದು ಕ್ರೀಡೆಯೇ. ಕೆಲವು ಕ್ರೀಡೆಗಳಲ್ಲಿ ದೈಹಿಕವಾಗಿ ಶ್ರಮಪಟ್ಟರೆ ಕ್ವಿಜ್ ನಲ್ಲಿ ಬುದ್ಧಿಗೆ ಕಸರತ್ತು ಕೊಡುವ ಕೆಲಸ ಆಗುತ್ತದೆ ಎಂದು ಪತ್ರಕರ್ತ ಹರೀಶ್ ಮೋಟುಕಾನ ಹೇಳಿದರು.
ಸಂತ ಅಗ್ನೆಸ್ ಕಾಲೇಜು(ಸ್ವಾಯತ್ತ) ಆಶ್ರಯದಲ್ಲಿ ಕರಾವಳಿ ಕುರುಬರ ಸಂಘ ಸಹಯೋಗದಲ್ಲಿ ಶನಿವಾರ ಅಂತರಕಾಲೇಜು ಕ್ರೀಡಾ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಸರ್ಕಾರಗಳು ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ಕೊಡುತ್ತಿವೆ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕ್ರೀಡೆಗಳ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಇರುತ್ತವೆ. ಅದನ್ನು ಮೆಲುಕು ಹಾಕುವ ಒಂದು ಪ್ರಯತ್ನ ಇಲ್ಲಿ ನಡೆದಿದೆ ಎಂದು ಹೇಳಿದರು.
ಪ್ರಾಂಶುಪಾಲೆ ಡಾ.ಎಂ.ವೆನಿಸ್ಸಾ ಎ.ಸಿ ಅಧ್ಯಕ್ಷತೆ ವಹಿಸಿದ್ದರು. ಸಮಾಜಸೇವಕ ಅಲೋಶಿಯಸ್ ಲಾಯ್ಸಲ್ ಡಿಸೋಜ ಅತಿಥಿಯಾಗಿದ್ದರು. ಸಂತ ಅಗ್ನೆಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ವಸುಧಾ ಎಸ್ ಉಪಸ್ಥಿತರಿದ್ದರು. ಪತ್ರಕರ್ತ ಮೋಹನದಾಸ್ ಮರಕಡ ಮತ್ತು ಸುಮಂತ್ ಪೂಜಾರಿ ಕ್ವಿಜ್ ಮಾಸ್ಟರ್ ಗಳಾಗಿದ್ದರು. ತ್ರಿಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿ ಸಂಘದ ಕ್ರೀಡಾ ಕಾರ್ಯದರ್ಶಿ ಪ್ರೇರಣಾ ವಂದಿಸಿದರು.
ಸಂತ ಅಲೋಶಿಯಸ್ ವಿನ್ನರ್: 24 ತಂಡಗಳು ಭಾಗವಹಿಸಿದ್ದ ಕ್ರೀಡಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಅನ್ವೇಷ್ ಮತ್ತು ಗ್ಯಾವಿನ್ ಮೊದಲ ಸ್ಥಾನ ಪಡೆದರು. ಶ್ರೀ ಗೋಕರ್ಣನಾಥೇಶ್ವರ ಕಾಲೇಜ್ ಆಫ್ ಎಜುಕೇಶನ್ ನ ರಂಜಿತ್ ಪೂಜಾರಿ, ತಿಮ್ಮಪ್ಪ ಪಟಗಾರ ದ್ವಿತೀಯ ಬಹುಮಾನ ಪಡೆದರೆ, ತೃತೀಯ ಬಹುಮಾನ ಪಾಂಡೇಶ್ವರದ ಶ್ರೀನಿವಾಸ ವಿಶ್ವವಿದ್ಯಾಲಯ ಕಾಲೇಜಿನ ಅಫ್ಜಲ್ ಅಲಿ ಮತ್ತು ಅರ್ಮಾನ್ ತಮ್ಮದಾಗಿಸಿಕೊಂಡರು.