ಮಂಗಳೂರು: ವಿಶ್ವಕಪ್ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ತಂಡ ಕಮಾಲ್ ಮಾಡಿದೆ. ಈ ಪಂದ್ಯದಲ್ಲಿ ಆಸಿಸ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದ ಛಾಯೆ ಮೂಡಿಸಿದೆ. ಈ ಭರ್ಜರಿ ಯಶಸ್ಸಿನ ಹಿಂದೆ ದಕ್ಷಿಣ ಕನ್ನಡದ ಯುವತಿಯ ಶ್ರಮವಿದೆ ಎಂಬುದು ಅಷ್ಟೆ ಸತ್ಯ. ಅಚ್ಚರಿಯಾಗುತ್ತಿದೆ ಅಲ್ಲವೆ. ಹೌದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ತಂಡದ ಮ್ಯಾನೇಜರ್ ಊರ್ಮಿಳಾ ರೊಸಾರಿಯೊ (34) ಅವರು ದಕ್ಷಿಣ ಕನ್ನಡದ ಕಿನ್ನಿಗೋಳಿ ಮೂಲದ ಐವಿ ಮತ್ತು ವ್ಯಾಲೆಂಟೈನ್ ರೊಸಾರಿಯೋ ದಂಪತಿಯ ಪುತ್ರಿ. ಆಕೆಯ ಪೋಷಕರು ಕತಾರ್‌ನ ದೋಹಾದಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ಜನಿಸಿದರು. ಆಕೆಯ ಪೋಷಕರು ಏಳು ವರ್ಷಗಳ ಹಿಂದೆ ಭಾರತಕ್ಕೆ ಮರಳಿದ್ದು, ಸಕಲೇಶಪುರದಲ್ಲಿ ಕಾಫಿ ಎಸ್ಟೇಟ್ ಖರೀದಿಸಿ ಅಲ್ಲಿಯೇ ನೆಲೆಸಿದ್ದಾರೆ.
ಕಾರ್ನೆಗೀ ಮೆಲನ್ ವಿಶ್ವವಿದ್ಯಾನಿಲಯದಿಂದ ಬಿಬಿಎ ಪದವೀಧರರಾದ ಊರ್ಮಿಳಾ ಅವರು ಆಸ್ಟ್ರೇಲಿಯಾಕ್ಕೆ ತೆರಳಿದರು. ಬಾಲ್ಯದಿಂದಲೂ ಕ್ರೀಡಾ ಪಟುವಾಗಿದ್ದ ಊರ್ಮಿಳಾ ಕತಾರ್ ಟೆನಿಸ್ ಫೆಡರೇಶನ್‌ನಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು. ಬಳಿಕ ಆಸ್ಟ್ರೇಲಿಯಾದಲ್ಲಿ ಮೊದಲು ಅವರು ಅಡಿಲೇಡ್ ಕ್ರಿಕೆಟ್ ತಂಡದೊಂದಿಗೆ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಅವರನ್ನು ತಂಡದ ಮ್ಯಾನೇಜರ್ ಆಗಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಕ್ಕೆ ನೇಮಿಸಲಾಯಿತು.
ಕಳೆದ ಫುಟ್ಬಾಲ್ ವಿಶ್ವಕಪ್ ಸಮಯದಲ್ಲಿ ಕ್ರಿಕೆಟ್‌ನಿಂದ ವಿರಾಮ ಪಡೆದ ಅವರು ನಾಲ್ಕು ತಿಂಗಳ ಕಾಲ ಕತಾರ್‌ನಲ್ಲಿ ಫುಟ್‌ಬಾಲ್ ಕ್ರೀಡಾಂಗಣ ಉಸ್ತುವಾರಿ ವಹಿಸಿದ್ದರು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕತಾರ್‌ನಿಂದ ಆಸ್ಟ್ರೇಲಿಯಾಕ್ಕೆ ಹಿಂದಿರುಗಿದ ನಂತರ ಅವರನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ತಂಡದ ಮ್ಯಾನೇಜರ್ ಆಗಿ ನೇಮಿಸಲಾಗಿತ್ತು.
ಹಿಂದಿ, ಕನ್ನಡ, ಕೊಂಕಣೆ ಸೇರಿದಂತೆ ಹಲವು ಭಾಷೆಗಳ ಪ್ರೌಢಿಮೆ: ವಿಶ್ವಕಪ್ ನಿರ್ವಹಣೆಗಾಗಿ ಪುರುಷರ ಕ್ರಿಕೆಟ್ ತಂಡದ ಜವಾಬ್ದಾರಿ ವಹಿಸಿದ್ದ ಉರ್ಮಿಳಾ ಭಾರತಕ್ಕೆ ಬಂದಿದ್ದು, ಶೀಘ್ರದಲ್ಲೇ ಅವರು ಮಹಿಳಾ ಕ್ರಿಕೆಟ್ ತಂಡವನ್ನು ಸೇರಲಿದ್ದು, ಅವರೊಂದಿಗೆ ಡಿಸೆಂಬರ್ ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಆಕೆಯ ತಂದೆ ವ್ಯಾಲೆಂಟೈನ್ ಹೇಳುತ್ತಾರೆ. ವಿದ್ಯಾರ್ಥಿನಿಯಾಗಿದ್ದಾಗ ಬಾಸ್ಕೆಟ್‌ಬಾಲ್, ಟೆನಿಸ್, ರೋಯಿಂಗ್ ಮತ್ತು ಬಂಗೀ ಜಂಪಿಂಗ್‌ನತ್ತ ಗಮನ ಹರಿಸಿದ್ದ ಆಕೆಗೆ ಕ್ರಿಕೆಟ್ ಎಂದರೆ ಬಹುಪ್ರೀತಿ ಎಂದು ಅವರು ತಿಳಿಸಿದ್ದಾರೆ. ಆಕೆಗೆ ಭಾರತ ಮತ್ತು ಇಲ್ಲಿನ ಭಾಷೆಗಳು ಗೊತ್ತಿರುವುದರಿಂದ ಯಶಸ್ವಿಯಾಗಿ ಮಹಿಳಾ ತಂಡವನ್ನು ನಿಭಾಯಿಸುತ್ತಾರೆ. ಹಿಂದಿ, ಕನ್ನಡ ಹಾಗೂ ಕೊಂಕಣಿಯನ್ನು ಆಕೆ ಮಾತನಾಡಬಲ್ಲರು ಎಂದು ತಿಳಿಸಿದರು.