ತಿರುವನಂತಪುರಂ: ಅದೃಷ್ಟ ಅನ್ನುವುದೇ ಹಾಗೆ.. ಯಾವಾಗ ಹೇಗೆ ಬರುತ್ತದೆ ಎನ್ನುವುದನ್ನು ಉಹಿಸುವುದು ಸಾಧ್ಯವೇ ಇಲ್ಲ. ಅದೇ ರೀತಿ ಕೇರಳದ ಕೋಝೀಕೊಡ್ ಜಿಲ್ಲೆಯ ಅಥೋಲಿಯ ಲಾಟರಿ ಅಂಗಡಿ ಮಾಲಿಕರೊಬ್ಬರಿಗೆ ರಾಜ್ಯ ಸರಕಾರ ನಡೆಸುವ ಫಿಫ್ಟಿ ಫಿಫ್ಟಿ ಲಾಟರಿಯಲ್ಲಿ ಬಂಪರ್ ಬಹುಮಾನ ಬಂದಿದೆ. ಇದೇನಪ್ಪ ಆಶ್ಚರ್ಯ ಅಂತೀರಾ. ನಂಬಲು ಕಷ್ಟವಾದರು ವಿಚಾರ ಸತ್ಯ. ಕೇರಳದ ಅಥೋಲಿಯಲ್ಲಿ ಲಾಟರಿ ಅಂಗಡಿ ಇಟ್ಟುಕೊಂಡಿರುವ ಎನ್ ಕೆ ಗಂಗಾಧರ್ ಅವರಿಗೆ ಒಂದು ಕೋಟಿ ರೂ. ಬಂಪರ್ ಬಹುಮಾನ ದೊರೆತಿದೆ. ಗಂಗಾಧರ್ ಅವರ ಶಾಪ್‌ನಲ್ಲಿ ಮಾರಾಟವಾಗದೇ ಉಳಿದ ಟಿಕೆಟ್‌ನಲ್ಲಿ ಒಂದು ಟಿಕೆಟ್‌ಗೆ ಒಂದು ಕೋಟಿ ಬಂಪರ್ ಬಹುಮಾನ ಲಭ್ಯವಾಗಿದೆ. ಅಲ್ಲದೆ ಅವರ ಸ್ಟಾಲ್ ನಲ್ಲಿ ವಿತರಣೆ ಆಗಿರುವ ಆರು ಲಾಟರಿ ಟಿಕೆಟ್‌ಗೆ 50,000ರೂ. ಬಹುಮಾನ ದೊರೆತಿದೆ.
ಎನ್ ಕೆ ಗಂಗಾಧರ್. ಇವರು ಸುಮಾರು ಮೂವತ್ತಮೂರು ವರ್ಷಗಳ ಕಾಲ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದು, ನಂತರ ಮೂವರು ವರ್ಷಗಳ ಹಿಂದೆ ಲಾಟರಿ ಶಾಪ್ ಓಪನ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಇವರ ಅಂಗಡಿಗೆ ಬಂಪರ್ ಲಾಟರಿ ಟಿಕೆಟ್ ಒಲಿದಿದೆ. ಮಾರಾಟವಾಗದೇ ಉಳಿದ ಟಿಕೆಟ್‌ಗೆ ಈ ಬಂಪರ್ ಬಹುಮಾನ ಲಭಿಸಿದೆ. ತನ್ನಲ್ಲಿರುವ ಆ ಟಿಕೆಟ್ ಕಳ್ಳತನ ಆಗುವ ಭಯದಲ್ಲಿ ಗಂಗಾಧರ್ ಅವರು ಅದನ್ನು ಬ್ಯಾಂಕಿಗೆ ನೀಡುವವರೆಗೆ ಯಾರಗೂ ಈ ವಿಷಯ ಹೇಳಿರಲಿಲ್ಲವಂತೆ.