ಉಳ್ಳಾಲ: ಮಂಜನಾಡಿ ನಿವಾಸಿ ಯುವಕನಿಗೆ ಕೇರಳದ 25 ಕೋಟಿ ರೂ. ಲಾಟರಿ ಒಲಿದಿರುವ ಸುದ್ದಿ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಆದರೆ ಇದೀಗ ಇದರ ಅಸಲಿಯತ್ತು ಬಯಲಾಗಿದೆ.
ಬೆಂಗಳೂರಿನಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿರುವ , ಮಂಜನಾಡಿ ಮೊಂಟೆಪದವು ನಿವಾಸಿ ಆಸೀಫ್ ಎಂಬವರಿಗೆ ಸೆ.20ರಂದು ಡ್ರಾಗೊಂಡಿದ್ದ 25 ಕೋಟಿ ಲಾಟರಿ ಒಲಿದಿರುವುದಾಗಿ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಹರಿದಾಡಿತ್ತು. ಆಸೀಫ್ ನಿನ್ನೆ ಊರಿಗೆ ಕಾರಿನಲ್ಲಿ ಬರುತ್ತಿದ್ದಾಗ ಮೊಬೈಲ್ ಗೆ ಕರೆಗಳ ಮೇಲೆ ಕರೆಗಳು ಬರುತ್ತಲೇ ಇತ್ತು. ಕರೆ ಸ್ವೀಕರಿಸುತ್ತಿದ್ದಂತೆ ಶುಭಾಶಯಗಳ ಸರಮಾಲೆಯೇ ಬರುತಿತ್ತು. ಹೆಚ್ಚು ವಿಚಾರಿಸುತ್ತಿದ್ದಂತೆಯೇ, ರೂ. 25 ಕೋಟಿ ಲಾಟರಿ ಟಿಕೆಟ್ ಒಲಿದಿರುವುದಾಗಿ ಸ್ನೇಹಿತರೊಬ್ಬರು ಹೇಳಿದ್ದಾರೆ.
ಕೇರಳ ಲಾಟರಿಯನ್ನೇ ಖರೀದಿಸದ ನನಗೆ ಹೇಗೆ 25 ಕೋಟಿ ಒಲಿಯುವುದು ಎಂದು ತನ್ನಷ್ಟಕ್ಕೆ ಆಸಿಫ್ ಮೌನವಾಗಿದ್ದರು. ಹೀಗೆ ರಾತ್ರಿ ವರೆಗೂ ಕರೆಗಳು ನಿರಂತರವಾಗಿ ಬರುತ್ತಲೇ ಇದ್ದವು. ಇವರ ಮೌನದಿಂದಾಗಿ ಕೋಟಿ ಗೆದ್ದಿರುವುದು ಖಾತ್ರಿಯಾದ ಜನರು ಮೆಸೇಜ್, ಫೋನ್ ಮಾಡುತ್ತಲೇ ಇದ್ದರು. ನಿಜವಾಗಿಯೂ ಲಾಟರಿ ಒಲಿಯುತ್ತಿದ್ದರೆ ಮೊಬೈಲ್ ಆಫ್ ಮಾಡಿ ಪೊಲೀಸ್ ಠಾಣೆಯಲ್ಲಿ ಕೂರಬೇಕಿತ್ತು. ಈ ಕುರಿತು ಆಸೀಫ್ ಸ್ನೇಹಿತರಲ್ಲಿ ವಿಚಾರಿಸಿದಾಗ, ವಾಟ್ಸ್ ಆ್ಯಪ್ ಲಿಂಕ್ ಬರುತ್ತಿದ್ದು ಅದನ್ನು ಬಳಸಿ ತಮ್ಮ ಸ್ನೇಹಿತರ ಭಾವಚಿತ್ರ ಹಾಗೂ ಹೆಸರನ್ನು ಹಾಕಿ ಮಜಾ ತೆಗೆದುಕೊಳ್ಳುವ ಪರಿಪಾಠ ನಡೆಯುತ್ತಿರುವುದು ತಿಳಿದುಬಂದಿದೆ.