ಮಂಗಳೂರು: ಗಡಿನಾಡು ಕನ್ನಡ ಶಾಲೆಗಳಿಗೆ ಮಲಯಾಳಂ ಶಿಕ್ಷಕರ ನೇಮಕ ಕುರಿತಂತೆ ಕರ್ನಾಟಕ ಸರ್ಕಾರ ಬರೆದಿದ್ದ ಪತ್ರಕ್ಕೆ ಕೇರಳ ಸರ್ಕಾರ ಡೋಂಟ್ ಕೇರ್ ನೀತಿ ಅನುಸರಿಸುತ್ತಿದೆ.
ಕಾಸರಗೋಡು ಅಡೂರಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕನ್ನಡ ತಿಳಿಯದ ಮಲಯಾಳಂ ಶಿಕ್ಷಕಿಯ ನೇಮಕವಾಗಿದ್ದು, ಮಲಯಾಳಂ ಶಿಕ್ಷಕಿ ನೇಮಕ ಮಾಡಿದಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಹಿಂದೆ ಪ್ರತಿಭಟನೆ ನಡೆಸಿದ್ದರು. ಮಲಯಾಳಂ ಶಿಕ್ಷಕಿಯ ಪಾಠ ವಿದ್ಯಾರ್ಥಿಗಳಿಗೆ ಅರ್ಥವಾಗದ ಸ್ಥಿತಿಯ ಹಿನ್ನಲೆಯಲ್ಲಿ ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕೇರಳ ಶಿಕ್ಷಣ ಸಚಿವ ಶಿವನ್ ಕುಟ್ಟಿಗೆ ಪತ್ರ ಬರೆದಿದ್ದರು. ಮಲಯಾಳಂ ಶಿಕ್ಷಕರ ಬದಲು ಕನ್ನಡ ಶಿಕ್ಷಕರ ನೇಮಿಸುವಂತೆ ಪತ್ರದಲ್ಲಿ ಕೋರಿದ್ದರು. ಆದರೆ ಕರ್ನಾಟಕ ಸಚಿವರ ಪತ್ರವನ್ನ ಕ್ಯಾರೇ ಅನ್ನದ ಕೇರಳ ಸಚಿವರು, ಪತ್ರಕ್ಕೆ ಸೊಪ್ಪು ಹಾಕಿಲ್ಲ ಎಂದು ವರದಿಯಾಗಿದೆ. ಈ ಮೂಲಕ ಕೇರಳ ಸರ್ಕಾರದಿಂದ ಕನ್ನಡ ಮಾಧ್ಯಮವನ್ನು ಮುಗಿಸುವ ಹುನ್ನಾರ ಮಾಡುತ್ತಿದೆ ಎಂಬ ಆರೋಪ ಎದುರಾಗಿದೆ.