ನವದೆಹಲಿ: ಕೇದಾರನಾಥ ಯಾತ್ರೆ ಮಾರ್ಗದ ಗೌರಿಕುಂಡ್ ಬಳಿ ಗುರುವಾರ ರಾತ್ರಿ ಭೂಕುಸಿತ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ. ಈ ಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ಮೂರು ಅಂಗಡಿಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ ಕೇದಾರನಾಥ ದೇಗುಲಕ್ಕೆ ಪಾದಯಾತ್ರೆ ನಿಲ್ಲಿಸಲಾಗಿದೆ. ಕೇದಾರನಾಥ ದೇಗುಲಕ್ಕೆ ಟ್ರೆಕ್ಕಿಂಗ್ ತೆರಳಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಭೂಕುಸಿತದಿಂದ ಧ್ವಂಸಗೊಂಡ ಅಂಗಡಿಗಳು ಮತ್ತು ಹೋಟೆಲ್‌ಗಳ ಅವಶೇಷಗಳು ಮಂದಾಕಿನಿ ನದಿಯಲ್ಲಿ ಹರಿಯುತ್ತಿವೆ. ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರು ರಾಜ್ಯ ಸಚಿವಾಲಯದ ವಿಪತ್ತು ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ರಕ್ಷಣಾ ಪ್ರಕ್ರಿಯೆ ತೀವ್ರಗೊಳಿಸಲು ಸೂಚನೆ ನೀಡಿದ್ದಾರೆ.