ಶಿರಸಿ: ಕೇಂದ್ರ ಸರಕಾರ ಕೊಡಮಾಡುವ ಅತ್ಯುತ್ತಮ ಶಿಕ್ಷಕ-ಶಿಕ್ಷಕಿ ರಾಷ್ಟ್ರ ಪ್ರಶಸ್ತಿ ಪ್ರಕಟಗೊಂಡಿದೆ.
2023ನೇ ಸಾಲಿನ ಅತ್ಯುತ್ತಮ ಶಿಕ್ಷಕ-ಶಿಕ್ಷಕಿ ರಾಷ್ಟ್ರಪ್ರಶಸ್ತಿಗೆ ರಾಜ್ಯದ ಇಬ್ಬರು ಗುರುಗಳು ಭಾಜನರಾಗಿದ್ದಾರೆ.
ಮಹಾಲಿಂಗಪುರ ನಗರದ ಕೆ.ಎಲ್.ಇ. ಸಂಸ್ಥೆಯ ಎಸ್.ಸಿ.ಪಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸಪನಾ ಶ್ರೀಶೈಲ ಅನಿಗೋಳ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, ಶಿರಸಿ ಮಾರಿಕಾಂಬಾ ಪ್ರೌಢಶಾಲೆಯ ಕನ್ನಡ ಶಿಕ್ಷಕ, ರಂಗಕರ್ಮಿ ನಾರಾಯಣ ಭಾಗವತ್ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಒದಗಿಬಂದಿದೆ.
ಎಂ.ಎಸ್ಸಿ, ಬಿ.ಎಡ್ ಪದವೀಧರರಾಗಿರುವ ಶ್ರೀಶೈಲ ಅನಿಗೋಳ ಅವರು ಕಳೆದ 19 ವರ್ಷಗಳಿಂದ ಕೆ.ಎಲ್.ಇ. ಸಂಸ್ಥೆಯ ಎಸ್.ಸಿ.ಪಿ. ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶ್ರೀಶೈಲ ಅವರು ತಮ್ಮ ಬೋಧನೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್, ಶೈಕ್ಷಣಿಕ ಆಪ್, ಕಂಪ್ಯೂಟರ್ ಮೂಲಕ ಕಠಿಣ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಸರಳವಾಗಿ ಅರ್ಥವಾಗುವಂತೆ ಬೋಧಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿದ್ದಾರೆ. ಇವರಿಗೆ 2021ರಲ್ಲಿ ರಾಜ್ಯ ಸರಕಾರ ಕೊಡಮಾಡುವ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿತ್ತು.
ರಾಷ್ಟ್ರಪ್ರಶಸ್ತಿಗೆ ಪಾತ್ರರಾಗಿರುವ ಇನ್ನೋರ್ವ ಶಿಕ್ಷಕ ನಾರಾಯಣ ಭಾಗವತ್ ಅವರು, ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದು ಅನೇಕ ಶೈಕ್ಷಣಿಕ ಪ್ರಯೋಗಗಳ ಜೊತೆ ಕನ್ನಡ ಭಾಷಾ ಪ್ರಯೋಗದಲ್ಲೂ ಕೆಲಸ ಮಾಡಿದ್ದಾರೆ.
ಕಳೆದ ವರ್ಷ ಇವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿತ್ತು ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ವಿಜ್ಞಾನ ನಾಟಕದಲ್ಲೂ ಇವರಿಗೆ ರಾಷ್ಟ್ರಮಟ್ಟದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿತ್ತು.