Site icon newsroomkannada.com

e-ಕಾಮರ್ಸ್ ಡೆಲಿವರಿ ಬಾಯ್ಸ್ : ನಿಮ್ಗೊಂದು ಗುಡ್ ನ್ಯೂಸ್! – ಇಲ್ಲಿದೆ ಡಿಟೇಲ್ಸ್..!

(Representative Image Used)

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಜುಲೈ ತಿಂಗಳಲ್ಲಿ 2023-24ನೇ ಸಾಲಿನ ಬಜೆಟ್ (Budget) ಮಂಡಿಸಿದ್ದರು. ಈ ಬಜೆಟ್ ನಲ್ಲಿ ಗಿಗ್ ಕೆಲಸಗಾರರಿಗೆ (Gig Worker) ಅಂದರೆ, ಸ್ವಿಗ್ಗಿ (Swiggy), ಝೊಮ್ಯಾಟೊ (Zomato) ಮತ್ತು ಅಮೆಜಾನ್​​ನಂತಹ (Amazon) ಇ-ಕಾಮರ್ಸ್ (e commerce)​​ ಡೆಲಿವರಿ ಬಾಯ್​​ಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ 4 ಲಕ್ಷ ರೂಪಾಯಿಗಳ ಜೀವ ವಿಮೆ (Life Insurance) ಮತ್ತು ಅಪಘಾತ ವಿಮೆಯನ್ನು (Accident Innsurance) ಘೋಷಿಸಿದ್ದರು.

ಇದೀಗ, ರಾಜ್ಯ ಸರ್ಕಾರ ಸೆ.08 ರಂದು ಅಧಿಕೃತ ಸುತ್ತೋಲೆ ಹೊರಡಿಸಿ ಈ ಯೋಜನೆಯನ್ನು ರಾಜ್ಯಾದ್ಯಂತ ಜಾರಿ ಮಾಡಿದೆ. ಈ ಮೂಲಕ, ರಾಜಸ್ಥಾನದ (Rajastan) ಬಳಿಕ ಗಿಗ್ ಕಾರ್ಮಿಕರಿಗೆ 4 ಲಕ್ಷ ರೂಪಾಯಿಗಳ ವಿಮಾ ಭದ್ರತೆ ಒದಗಿಸಿದ ಎರಡನೇ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ (Karnataka) ಪಾತ್ರವಾಗಿದೆ.

2022 ರ ನೀತಿ ಆಯೋಗದ (NITI Ayog) ವರದಿ ಪ್ರಕಾರ ರಾಜ್ಯದಲ್ಲಿ ಅಂದಾಜು 2.3 ಲಕ್ಷ ‘ಗಿಗ್’ (Gig Worker)) ಕೆಲಸಗಾರರಿದ್ದಾರೆ. ಆದರೆ, ರಾಜ್ಯ ಕಾರ್ಮಿಕ ಇಲಾಖೆಯು ಈ ಬಗ್ಗೆ ಯಾವುದೇ ನಿಖರ ಅಂಕಿ-ಸಂಖ್ಯೆ ಹೊಂದಿಲ್ಲ.

ಸರಕು ಮತ್ತು ಸೇವೆಗಳನ್ನು ನಿಗದಿತ ಸಮಯದಲ್ಲಿ ಗ್ರಾಹಕರಿಗೆ ತಲುಪಿಸಲು ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುವ ಈ ‘ಗಿಗ್’ ಕಾರ್ಮಿಕರ ಭದ್ರತೆಗೆಂದೇ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯ ಪ್ರಯೋಜನ ಪಡೆಯಬೇಕಾದರೆ ಕೆಲವು ಷರತ್ತುಗಳನ್ನು ಸರ್ಕಾರ ವಿಧಿಸಿದ್ದು ಅವುಗಳ ವಿವರ ಇಲ್ಲಿದೆ

ಜೀವ ವಿಮೆ ಮತ್ತು ಅಪಘಾತ ಜೀವ ವಿಮೆ ಪಡೆದುಕೊಳ್ಳಲು ಇರುವ ಷರತ್ತುಗಳು:

– ಕನಿಷ್ಠ ಒಂದು ವರ್ಷದ ಅವಧಿಯವರೆಗೆ ಯಾವುದೇ ಆನ್‌ಲೈನ್ ಆಹಾರ ವಿತರಣೆ ಅಥವಾ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಕಂಪನಿಯಲ್ಲಿ ಗಿಗ್ ಕೆಲಸಗಾರರಾಗಿ ಕೆಲಸ ಮಾಡುತ್ತಿರುವ 18-60 ವರ್ಷ ವಯಸ್ಸಿನ ವ್ಯಕ್ತಿಗಳು ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ.

– ಒಂದುವೇಳೆ ಈ ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟರೇ 4 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಇದರಲ್ಲಿ, 2 ಲಕ್ಷ ರೂಪಾಯಿ ಅಪಘಾತ ಕವರೇಜ್ ಕೂಡ ಸೇರಿದೆ. ಒಂದು ವೇಳೆ ಅಪಘಾತದಿಂದ ಗಾಯ ಮತ್ತು ಅಂಗವೈಕಲ್ಯಕ್ಕೊಳಗಾದರೆ, ಅದರ ಪ್ರಮಾಣವನ್ನು ಆಧರಿಸಿ ಗಿಗ್ ಕೆಲಸಗಾರರಿಗೆ ಹಣ ನೀಡಲಾಗುತ್ತದೆ.

– ಆಸ್ಪತ್ರೆಗೆ ದಾಖಲಾದರೆ, 1 ಲಕ್ಷದವರೆಗಿನ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ.

– ಗಿಗ್ ಕಾರ್ಮಿಕರು ಆದಾಯ ತೆರಿಗೆ ಪಾವತಿಸುತ್ತಿದ್ದರೆ, ಭವಿಷ್ಯ ನಿಧಿ ಅಥವಾ ಇಎಸ್‌ಐ ಹೊಂದಿದ್ದರೆ ಅಂತವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

– ಗಿಗ್  ಕಾರ್ಮಿಕ ತನ್ನ ಕರ್ತವ್ಯದಲ್ಲಿರುವ ಸಂದರ್ಭ ಮದ್ಯಪಾನ ಅಥವಾ ಡ್ರಗ್ಸ್‌ನ ಅಮಲಿನಲ್ಲಿ ಅಪಘಾತವುಂಟಾಗಿ ಗಾಯಗೊಂಡರೆ ಅಥವಾ ಮೃತಪಟ್ಟರೆ ಈ ವಿಮಾ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

– ಗಿಗ್ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡರೆ, ಉದ್ದೇಶಪೂರ್ವಕವಾಗಿ ಯಾರನ್ನಾದರೂ ನೋಯಿಸಲು ಅಪಘಾತದ ಕೃತ್ಯವನ್ನು ಮಾಡಿದರೆ ಅಥವಾ ಮಾನಸಿಕ ಅಸ್ಥಿರತೆಯಿಂದ ಅಪಘಾತ ಸಂಭವಿಸಿದಲ್ಲಿ ಈ ಯೋಜನೆಯ ಪ್ರಯೋಜನೆ ಲಭ್ಯವಾಗುವುದಿಲ್ಲ.

– ಅಪಘಾತ ಸಂಭವಿಸಿದ ಅಥವಾ ಕಾರ್ಮಿಕ್ ಸಾವಿಗೊಳಗಾಗಿ ಒಂದು ವರ್ಷದೊಳಗೆ ವಿಮೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

– ರಾಜ್ಯ ಸರ್ಕಾರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು.

– ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಮತ್ತು ಇ-ಲೇಬರ್ ಐಡೆಂಟಿಟಿ ಕಾರ್ಡ್ ಸೇರಿದಂತೆ ವೈಯಕ್ತಿಕ ದಾಖಲೆ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನೀಡಿ ಈ ಯೋಜನೆಗೆ ಗಿಗ್ ಕಾರ್ಮಿಕರು ತಮ್ಮ ಹೆಸರುನ್ನು ನೋಂದಾಯಿಸಿಕೊಳ್ಳಬಹುದಾಗಿರುತ್ತದೆ.

Exit mobile version