ತುಮಕೂರು: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್, ಬಹುಭಾಷಾ ನಟ ಪ್ರಕಾಶ್ ರಾಜ್ ಬಳಿಕ ಇದೀಗ ಹಿಂದು ಧರ್ಮದ ಮೂಲವನ್ನೇ ಪ್ರಶ್ನಿಸುವ ಮೂಲಕ ಸಚಿವ ಜಿ. ಪರಮೇಶ್ವರ್ ವಿವಾದದ ಹುತ್ತಕ್ಕೆ ಬಲವಾಗಿ ಬಡಿದಿದ್ದಾರೆ.
ಕೊರಟಗೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್, ‘ಹಿಂದೂ ಧರ್ಮ ಯಾವಾಗ ಹುಟ್ಟಿತ್ತು? ಅದನ್ನು ಯಾರು ಹುಟ್ಟಿಸಿದರು? ಅನ್ನೋದು ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ’ ಎಂದು ಹೇಳಿದ್ದಾರೆ.
‘ಬೌದ್ಧ ಧರ್ಮ ನಮ್ಮ ದೇಶದಲ್ಲಿ ಹುಟ್ಟಿತ್ತು, ಜೈನ ಧರ್ಮವೂ ನಮ್ಮ ದೇಶದಲ್ಲಿ ಹುಟ್ಟಿತ್ತು. ಆದರೆ, ಹಿಂದೂ ಧರ್ಮವನ್ನು ಹುಟ್ಟಿಸಿದವರು ಯಾರು ಅನ್ನುವುದು ಇದುವರೆಗೂ ಪ್ರಶ್ನೆಯಾಗಿಯೇ ಉಳಿದಿದೆ..’ ಎಂದು ಪರಮೇಶ್ವರ್ ಹೇಳುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
‘ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ನಮ್ಮ ದೇಶಕ್ಕೆ ಹೊರಗಡೆಯಿಂದ ಬಂತು ಆದರೆ ಹಿಂದೂ ಧರ್ಮ ಮಾತ್ರ ಯಾವಾಗ ಹುಟ್ಟಿತು ಅನ್ನೋದು ಯಾರಿಗೂ ಗೊತ್ತೇ ಇಲ್ಲ’ ಎಂದಿದ್ದಾರೆ.
‘ಸನಾತನ ಧರ್ಮ ಎಂಬುದು ಸಾಂಕ್ರಾಮಿಕ ರೋಗವಿದ್ದಂತೆ..’ ಎಂಬರ್ಥದ ಹೇಳಿಕೆ ನೀಡಿ ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿರುವ ಉದಯನಿಧಿ ಸ್ಟಾಲಿನ್ ಹೇಳಿಕೆ ಬಳಿಕ ಇದೀಗ ಸಚಿವ ಪರಮೇಶ್ವರ್ ನೀಡಿರುವ ಈ ಹೇಳಿಕೆ ಇನ್ನೊಂದು ಸುತ್ತಿನ ವಿವಾದಕ್ಕೆ ಕಾರಣವಾಗುವ ಸಾಧ್ಯತೆಗಳು ದಟ್ಟವಾಗಿದೆ.