ಬೆಂಗಳೂರು: 1999 ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಮಡಿದ ಭಾರತೀಯ ಸೈನಿಕರ ಶೌರ್ಯ ಮತ್ತು ಪರಾಕ್ರಮಕ್ಕೆ ಗೌರವ ಸಲ್ಲಿಸಲು ಪ್ರತಿವರ್ಷ ಜುಲೈ 26 ರಂದು ದೇಶಾದ್ಯಂತ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ. 1999 ರಲ್ಲಿ ಪಾಕಿಸ್ತಾನಿ ಸೈನಿಕರು ಜಮ್ಮು-ಕಾಶ್ಮಿರದಲ್ಲಿ ಗಡಿ ನಿಯಂತ್ರಣಾ ರೇಖೆಯನ್ನು ದಾಟಿ ನಮ್ಮ ಬೆಟ್ಟಗಳನ್ನು ವಶಪಡಿಸಿಕೊಂಡಿದ್ದರು. ಇವರ ವಿರುದ್ಧ ಭಾರತೀಯ ಸೈನಿಕರು ವೀರಾವೇಶದಿಂದ ಹೋರಾಡಿ ವಿಜಯಶಾಲಿಯಾದರು. ಈ ಮಿಲಿಟರಿ ಕಾರ್ಯಾಚರಣೆಗೆ “ಕಾರ್ಗಿಲ್ ಯುದ್ಧ” ಎಂದು ಕರೆಯುತ್ತಾರೆ. ಇಡೀ ಕಾರ್ಯಾಚರಣೆಗೆ ಆಪರೇಷನ್ ವಿಜಯ್ ಎಂದು ಹೆಸರಿಸಲಾಗಿದೆ.
2023 ಜುಲೈ 26ರಕ್ಕೆ ಕಾರ್ಗಿಲ್ ಯುದ್ಧ ಸಂಭವಿಸಿ 24 ವರ್ಷವಾಯಿತು. 1999 ರಲ್ಲಿ ಕಾರ್ಗಿಲ್ ಯುದ್ಧವು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಿತು. ಅಲ್ಲಿ ಭಾರತೀಯ ಸೇನೆಯು ಪಾಕಿಸ್ತಾನಿ ಸೈನಿಕರನ್ನು ಬಗ್ಗು ಬಡಿಯುವ ಮೂಲಕ ‘ಆಪರೇಷನ್ ವಿಜಯ್’ ಅಡಿಯಲ್ಲಿ ಪ್ರಸಿದ್ಧ ‘ಟೈಗರ್ ಹಿಲ್’ ಮತ್ತು ಇತರ ಪ್ರಮುಖ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿತು.