ನವದೆಹಲಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು ಅತ್ಯುತ್ತಮ ಕನ್ನಡ ಚಲನಚಿತ್ರವಾಗಿ ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಮೂಡಿಬಂದಿದೆ.
ಶ್ವಾನ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧವನ್ನು ವರ್ಣಿಸುವ ಕಥಾ ಹಂದರವಿದ್ದ ‘777 ಚಾರ್ಲಿ’ ಬಾಕ್ಸ್ ಆಫೀಸಿನಲ್ಲೂ ಕಮಾಲ್ ಮಾಡಿತ್ತು.
‘ಕಡೈಸಿ ವಿವಾಸಾಯಿ’ ಅತ್ಯುತ್ತಮ ತಮಿಳು ಚಿತ್ರವಾಗಿ ಮೂಡಿಬಂದಿದ್ದರೆ, ಉತ್ತಮ ತೆಲುಗು ಚಿತ್ರ ಪ್ರಶಸ್ತಿ ‘ಉಪ್ಪೇನಾ’ ಪಾಲಾಗಿದೆ. ಮಲಯಾಳಂ ಭಾಷೆಯ ಉತ್ತಮ ಚಿತ್ರ ಪ್ರಶಸ್ತಿ ‘ಹೋಮ್’ ಪಾಲಾಗಿದೆ.
ಅತ್ಯುತ್ತಮ ಫೀಚರ್ ಸಿನೆಮಾ ಪ್ರಶಸ್ತಿಯನ್ನು ಮಾಧವನ್ ನಟಿಸಿ, ನಿರ್ದೇಶಿಸಿರುವ ‘ರಾಕೆಟ್ರಿ : ದಿ ನಂಬಿ ಎಫೆಕ್ಟ್’ ಗೆದ್ದುಕೊಂಡಿದೆ.
‘ಗಂಗೂಬಾಯಿ ಕಥಿವಾಡಿ’ ಮತ್ತು ‘ಮಿಮಿ’ ಚಿತ್ರದಲ್ಲಿನ ನಟನೆಗಾಗಿ ಅಲಿಯಾ ಭಟ್ ಹಾಗೂ ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ.
‘ಪುಷ್ಪ – ದಿ ರೈಸ್’ ಚಿತ್ರದಲ್ಲಿಜಬರ್ದಸ್ತ್ ಪಾತ್ರನಿರ್ವಹಣೆಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಚಿತ್ರಕ್ಕೆ ಜನಪ್ರಿಯ ಚಿತ್ರದ ನೆಲೆಯಲ್ಲಿ ಪ್ರಶಸ್ತಿ ಲಭಿಸಿದೆ. ‘ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ನರ್ಗೀಸ್ ದತ್ ಪ್ರಶಸ್ತಿ ಘೋಷಣೆಯಾಗಿದೆ.
ತನ್ನ ಅಭಿನಯದ ‘777 ಚಾರ್ಲಿ’ ಚಿತ್ರಕ್ಕೆ ಕನ್ನಡ ಭಾಷೆಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿರುವುದಕ್ಕೆ ನಟ ರಕ್ಷಿತ್ ಶೆಟ್ಟಿ ಫುಲ್ ಖುಷ್ ಆಗಿದ್ದಾರೆ.
ಈ ಕುರಿತಾಗಿ ಎಕ್ಸ್ (ಈ ಹಿಂದೆ ಟ್ವಿಟರ್) ಅಕೌಂಟ್ ನಲ್ಲಿ ಬರೆದುಕೊಂಡಿರುವ ಅವರು, ‘ಈ ಸಂತೋಷವನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ..’ ಎಂದಿದ್ದಾರೆ.