ಮಂಗಳೂರು: ಸಿನಿಮಾ ಮತ್ತು ನಾಟಕಗಳಲ್ಲಿ ದೈವಾರಾಧನೆಗೆ ಅಪಮಾನ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಇಲ್ಲಿನ ದೈವಾರಾಧಕರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
`ಕಾಂತಾರ’ (Kantara) ಸಿನಿಮಾದಲ್ಲಿ ದೈವದ ಅಣುಕು ವೇಷ ಹಾಕಿರುವ ರಿಷಬ್ ಶೆಟ್ಟಿ `ಶಿವದೂತೆ ಗುಳಿಗೆ’ ನಾಟಕದಲ್ಲಿ ದೈವದ ಅಣುಕು ವೇಷ ಧರಿಸಿದ ಸ್ವರಾಜ್ ಹಾಗೂ `ಕಾವೇರಿ’ ಧಾರಾವಾಹಿಯ ಸಿ.ಕೆ ಪ್ರಶಾಂತ್ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಆಖಲಿಸಿ ತನಿಖೆ ನಡೆಸುವಂತೆ ತುಳುನಾಡ ದೈವಾರಾಧನಾ ಸಂರಕ್ಷಣಾ ವೇದಿಕೆ ಮನವಿ ಮಾಡಿದೆ.
ದೈವಾರಾಧಕರ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್ , ಬಜರಂಗದಳ ) ಸಾಥ್ ನೀಡಿದೆ. ಮುಂದೆ ಟಿವಿ, ಸಿನೆಮಾ ನಾಟಕಗಳಲ್ಲಿ ದೈವಾರಾಧನೆಯ ಪ್ರದರ್ಶನವಾಗಬಾರದು. ಮುಂದೆ ಕಂಡ ಕಂಡಲ್ಲಿ ದೈವಾರಾಧನೆ ಪ್ರದರ್ಶನವಾದ್ರೆ ಮುತ್ತಿಗೆ ಹಾಕುತ್ತೇವೆ. ಈ ಬಗ್ಗೆ ರಿಷಬ್ ಶೆಟ್ಟಿಗೂ ಎಚ್ಚರಿಕೆ ನೀಡುತ್ತೇವೆ ಎಂದು ಬಜರಂಗದಳದ ಮುಖಂಡ ಶರಣ ಪಂಪ್ವೆಲ್ ಎಚ್ಚರಿಕೆ ನೀಡಿದ್ದಾರೆ.
ಮುಂದೆ ಸಿನಿಮಾಗಳಲ್ಲಿ ದೈವಾರಾಧನೆ ಪ್ರದರ್ಶನ ಆದ್ರೆ ನಮ್ಮ ಹೋರಾಟದ ಸ್ವರೂಪ ತೀವ್ರಗೊಳ್ಳುತ್ತದೆ. ದೈವಾರಾಧನೆಯು ಯಾವುದೇ ನಾಟಕ, ಸಿನಿಮಾ, ಧಾರವಾಹಿ, ಯಕ್ಷಗಾನದಲ್ಲೂ ಪ್ರದರ್ಶನ ಆಗಬಾರದು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಬೆಳ್ತಂಗಡಿ ನಳಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ತುಳುನಾಡಿನಲ್ಲಿ ಹುಟ್ಟಿ ತುಳುನಾಡು ದೈವಕ್ಕೆ ಅಪಮಾನ ಮಾಡುತ್ತಿದ್ದಾರೆ ಅಂದ್ರೆ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಮೂಲ ಪರಂಪರೆಯಿಂದ ನಾವು ಮಾಡಿಕೊಂಡು ಬಂದ ಚಾಕರಿ ಅದರೂ ದೈವದ ಚಾಕರಿಯನ್ನು ಮಾಡಿದವರೇ ಮಾಡಬೇಕು. ಆದ್ರೆ ದೈವದ ಬಣ್ಣ, ಹಚ್ಚಿ, ಗಗ್ಗರ ಕಟ್ಟಿಕೊಂಡು ಇಷ್ಟಬಂದಂತೆ ಮಾಡುತ್ತಿದ್ದಾರೆ. ಕಾಂತಾರ ಸಿನಿಮಾದಲ್ಲಿ ಮಾಡಿದ್ದಾರೆ. ಅವರಿಗೆ ಏನು ನೈತಿಕತೆ ಇದೆ? ನಮ್ಮ ದೈವವನ್ನು ಬೀದಿಬದಿಗೆಲ್ಲ ಕೊಂಡೊಯ್ದು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.