ಚೆನ್ನೈ: ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ (ICC World Cup Cricket)ನ ಲೋ ಸ್ಕೋರ್ ಪಂದ್ಯವೊಂದಕ್ಕೆ ಸಾಕ್ಷಿಯಾದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಆರಂಭಿಕ ಆತಂಕದ ಕ್ಷಣಗಳನ್ನು ಎದುರಿಸಿಯೂ ಗೆದ್ದ ಟೀಂ ಇಂಡಿಯಾ (Team India) ತವರಿನ ವಿಶ್ವಕಪ್ ಕೂಟದಲ್ಲಿ ಶುಭಾರಂಭ ಮಾಡಿದೆ.
ಈ ಮೂಲಕ, ಐದು ಬಾರಿಯ ವರ್ಲ್ಡ್ ಚಾಂಪಿಯನ್ ಆಸ್ಟ್ರೇಲಿಯಾವನ್ನು (Australia) 6 ವಿಕೆಟ್ ಗಳಿಂದ ಕೆಡವಿ ತನ್ನ ವಿಶ್ವಕಪ್ ಅಭಿಯಾನವನ್ನು ಆತ್ಮವಿಶ್ವಾಸದಿಂದ ಪ್ರಾರಂಭಗೊಳಿಸಿದೆ.
ಗೆಲುವಿಗೆ 50 ಓವರ್ ಗಳಲ್ಲಿ 200 ರನ್ ಗಳ ಗುರಿಯನ್ನು ಪಡೆದ ಟೀಂ ಇಂಡಿಯಾ ಒಂದು ಹಂತದಲ್ಲಿ ಆಸೀಸ್ ವೇಗಿಗಳ ಪರಾಕ್ರಮದಿಂದ ಕೇವಲ 2 ರನ್ನಿಗೆ 3 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಈ ಸಂದರ್ಭದಲ್ಲಿ ತಂಡದ ನೆರವಿಗೆ ಧಾವಿಸಿದ ಅನುಭವಿ ಆಟಗಾರರರಾದ ವಿರಾಟ್ ಕೊಹ್ಲಿ (Virat Kohli) (85) ಮತ್ತು ಕೆ ಎಲ್ ರಾಹುಲ್ (K L Rahul) (ಅಜೇಯ 97) ಎಚ್ಚರಿಕೆಯ ಆಟದ ಮೂಲಕ ತಂಡಕ್ಕೆ 6 ವಿಕೆಟ್ ಗಳ ಅಧಿಕಾರಯುತ ಗೆಲುವನ್ನು ತಂದುಕೊಟ್ಟರು.