main logo

ಆಪತ್ಕಾಲದಲ್ಲಿ ನೆರವಿಗೆ ಬಂದ ‘ಸೀನಿಯರ್ಸ್’! : ಕೊಹ್ಲಿ-ರಾಹುಲ್ ಬೊಂಬಾಟ್ ಆಟಕ್ಕೆ ಆಸೀಸ್ ‘ಠುಸ್!’

ಆಪತ್ಕಾಲದಲ್ಲಿ ನೆರವಿಗೆ ಬಂದ ‘ಸೀನಿಯರ್ಸ್’! : ಕೊಹ್ಲಿ-ರಾಹುಲ್ ಬೊಂಬಾಟ್ ಆಟಕ್ಕೆ ಆಸೀಸ್ ‘ಠುಸ್!’

ಚೆನ್ನೈ: ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ (ICC World Cup Cricket)ನ ಲೋ ಸ್ಕೋರ್ ಪಂದ್ಯವೊಂದಕ್ಕೆ ಸಾಕ್ಷಿಯಾದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಆರಂಭಿಕ ಆತಂಕದ ಕ್ಷಣಗಳನ್ನು  ಎದುರಿಸಿಯೂ ಗೆದ್ದ ಟೀಂ ಇಂಡಿಯಾ (Team India) ತವರಿನ ವಿಶ್ವಕಪ್ ಕೂಟದಲ್ಲಿ ಶುಭಾರಂಭ ಮಾಡಿದೆ.

ಈ ಮೂಲಕ, ಐದು ಬಾರಿಯ ವರ್ಲ್ಡ್ ಚಾಂಪಿಯನ್ ಆಸ್ಟ್ರೇಲಿಯಾವನ್ನು (Australia) 6 ವಿಕೆಟ್ ಗಳಿಂದ ಕೆಡವಿ ತನ್ನ ವಿಶ್ವಕಪ್ ಅಭಿಯಾನವನ್ನು ಆತ್ಮವಿಶ್ವಾಸದಿಂದ ಪ್ರಾರಂಭಗೊಳಿಸಿದೆ.

ಗೆಲುವಿಗೆ 50 ಓವರ್ ಗಳಲ್ಲಿ 200 ರನ್ ಗಳ ಗುರಿಯನ್ನು ಪಡೆದ ಟೀಂ ಇಂಡಿಯಾ ಒಂದು ಹಂತದಲ್ಲಿ ಆಸೀಸ್ ವೇಗಿಗಳ ಪರಾಕ್ರಮದಿಂದ ಕೇವಲ 2 ರನ್ನಿಗೆ 3 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಈ ಸಂದರ್ಭದಲ್ಲಿ ತಂಡದ ನೆರವಿಗೆ ಧಾವಿಸಿದ ಅನುಭವಿ ಆಟಗಾರರರಾದ ವಿರಾಟ್ ಕೊಹ್ಲಿ (Virat Kohli) (85) ಮತ್ತು ಕೆ ಎಲ್ ರಾಹುಲ್ (K L Rahul) (ಅಜೇಯ 97) ಎಚ್ಚರಿಕೆಯ ಆಟದ ಮೂಲಕ ತಂಡಕ್ಕೆ 6 ವಿಕೆಟ್ ಗಳ ಅಧಿಕಾರಯುತ ಗೆಲುವನ್ನು ತಂದುಕೊಟ್ಟರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ 5 ರನ್ ಗಳಿಸುವಷ್ಟರಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಬುಮ್ರಾ (Jasprit Bumrah) ಘಾತಕ ದಾಳಿಗೆ ಮಿಚೆಲ್ ಮಾರ್ಷ್ ಸೊನ್ನೆ ಸುತ್ತಿದರು. ಬಳಿಕ ಡೇವಿಡ್ ವಾರ್ನರ್ (41) ಮತ್ತು ಸ್ಟಿವನ್ ಸ್ಮಿತ್ (46) ನಡುವಿನ 73 ರನ್ ಗಳ ಜೊತೆಯಾಟ ಆಸ್ಟ್ರೇಲಿಯಾವನ್ನು ಬೃಹತ್ ಮೊತ್ತದೆಡೆ ಸಾಗಿಸುವ ಲಕ್ಷಣಗಳಿದ್ದವು.

ಆದರೆ, ಈ ಹಂತದಲ್ಲಿ ಕುಲ್ ದೀಪ್ ಯಾದವ್ ವಾರ್ನರ್ ವಿಕೆಟ್ ಕೀಳುವ ಮೂಲಕ ಭಾರತಕ್ಕೆ ದೊಡ್ಡ ಬ್ರೇಕ್ ಒದಗಿಸಿಕೊಟ್ಟರು.  ಆ ಬಳಿಕ ಸ್ಮಿತ್ ಕೂಡ ಜಡೆಜಾ ಬೌಲಿಂಗ್ ನಲ್ಲಿ ಬೌಲ್ಡ್ ಆಗುವುದರೊಂದಿಗೆ ಆಸೀಸ್ ಬ್ಯಾಟಿಂಗ್ ಪತನ ಪ್ರಾರಂಭಗೊಂಡಿತು.
110 ಕ್ಕೆ 3 ಎಂಬಲ್ಲಿಂದ ಮತ್ತೆ 55 ರನ್ ಗಳಾಗುವಷ್ಟರಲ್ಲಿ ಕಾಂಗಾರೂ ಪಾಳಯದ 5 ವಿಕೆಟ್ ಗಳು ಉರುಳಿದ್ದವು. ಜಡೆಜಾ (28 ಕ್ಕೆ 3) ಮತ್ತು ಕುಲ್ ದೀಪ್ ಯಾದವ್ (42 ಕ್ಕೆ 2) ಹಾಗೂ ಅನುಭವಿ ಸ್ಪಿನ್ನರ್ ಅಶ್ವಿನ್ (34 ಕ್ಕೆ 1) ಸೇರಿಕೊಂಡು ಆಸೀಸ್ ಬ್ಯಾಟ್ಸ್ ಮನ್ ಗಳನ್ನು ಕಂಗೆಡಿಸಿದರು. ಇವರಿಗೆ ಬುಮ್ರಾ (35 ಕ್ಕೆ 2) ಮತ್ತು ಸಿರಾಜ್ (26 ಕ್ಕೆ 1) ಉತ್ತಮ ಬೆಂಬಲ ನೀಡಿದರು.
ಮಿಚೆಲ್ ಸ್ಟಾರ್ಕ್ (28) ಮತ್ತು ಆಡಂ ಝಂಪ ಅವರ ಅಂತಿಮ ವಿಕೆಟ್ ಜೊತೆಯಾಟದಲ್ಲಿ 34 ರನ್ ಹರಿದು ಬಂದ ಕಾರಣ ಆಸ್ಟ್ರೇಲಿಯಾ 199 ರನ್ ಗಳನ್ನಾದರು ಪೇರಿಸುವಂತಾಯಿತು. 20 ಎಸೆತಗಳನ್ನೆದುರಿಸಿ 6 ರನ್ ಮಾಡಿದ ಝಂಪ, ಸ್ಟಾರ್ಕ್ ಅವರಿಗೆ ಬೆಂಬಲವಾಗಿ ನಿಂತು ತಂಡ ಗೌರವಯುತ ಮೊತ್ತ ಪೇರಿಸುವಲ್ಲಿ ಸಹಕಾರಿಯಾದರು.
ಆಸೀಸ್ ನೀಡಿದ 200 ರನ್ ಗಳ ಸುಲಭ ಸವಾಲನ್ನು ಬೆನ್ನತ್ತಿದ ಟೀಂ ಇಂಡಿಯಾ ಮೇಲೆ ಹೇಝಲ್ ವುಡ್ (38 ಕ್ಕೆ 3) ಮತ್ತು ಮಿಷೆಲ್ ಸ್ಟಾರ್ಕ್ (31 ಕ್ಕೆ 1) ಆರಂಭದ ಆಘಾತವಿಕ್ಕಿದರು. ಕಪ್ತಾನ ರೋಹಿತ್ ಶರ್ಮಾ ಸೊನ್ನೆ ಸುತ್ತಿದರೆ, ಇಶಾನ್ ಕಿಶನ್ ಸಹ ಸೊನ್ನೆಗೆ ತೃಪ್ತಿಪಟ್ಟುಕೊಂಡರು. ಮತ್ತೆ ಬಂದ ಶ್ರೇಯಸ್ ಅಯ್ಯರ್ ಅವರದ್ದೂ ‘ಶೂನ್ಯ ಕಾಣಿಕೆ’! ಅಂದರೆ ಈ ಹಂತದಲ್ಲಿ ತಂಡಕ್ಕೆ ಲಭಿಸಿದ್ದ 2 ರನ್ ಗಳು ‘ಇತರೇ’ ರೂಪದಲ್ಲಿ ಬಂದಿತ್ತು!
ಈ ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಕೆ ಎಲ್ ರಾಹುಲ್ ನಿಧಾನಗತಿಯ ಆಟಕ್ಕೆ ಒತ್ತು ನೀಡಿ ಆಸೀಸ್ ಬೌಲರ್ ಗಳನ್ನು ಎಚ್ಚರಿಕೆಯಿಂದ ಎದುರಿಸುತ್ತಾ ರನ್ ಸೇರಿಸತೊಡಗಿದರು. ಒಂದು ಹಂತದಲ್ಲಿ ಕೊಹ್ಲಿಗೆ ಅಮೂಲ್ಯ ಜೀವದಾನವೊಂದು ಸಹ ಲಭಿಸಿತ್ತು.

ಕೊಹ್ಲಿ-ರಾಹುಲ್ ಜೋಡಿಯ ತಾಳ್ಮೆಯ 163 ರನ್ ಗಳ ಜೊತೆಯಾಟ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿತು. 116 ಎಸೆತಗಳಲ್ಲಿ 85 ರನ್ ಗಳಿಸಿದ ಕೊಹ್ಲಿ ಔಟಾದ ಬಳಿಕ ಹಾರ್ದಿಕ್ ಪಾಂಡ್ಯ (11) ಜೊತೆಯಲ್ಲಿ ರಾಹುಲ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಆದರೆ ಈ ಸೊಗಸಾದ ಆಟಕ್ಕೆ ಶತಕದ ಅವಕಾಶ ಕೈತಪ್ಪಿದ್ದು ಮಾತ್ರ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಮೂಡಿಸಿತು. 115 ಎಸೆತಗಳಲ್ಲಿ 97 ರನ್ ಬಾರಿಸಿ ಔಟಾಗದೆ ಉಳಿದ ಕೆ ಎಲ್ ರಾಹುಲ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದುಬಂತು.





Related Articles

Leave a Reply

Your email address will not be published. Required fields are marked *

error: Content is protected !!