Site icon newsroomkannada.com

ಸಚಿವ ಗಡ್ಕರಿಗೆ ಬೆದರಿಕೆ ಹಾಕಿದ್ದ ಜಯೇಶ್‌ ಪೂಜಾರಿಗೆ ಲಷ್ಕರ್‌ ಉಗ್ರನಂಟು

ಬೆಳಗಾವಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಹಾಕಿದ್ದ ಮಂಗಳೂರು ಮೂಲದ ಜಯೇಶ್ ಪೂಜಾರಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವುದು ತನಿಖೆಯಿಂದ ತಿಳಿದುಬಂದಿದೆ. 2005ರಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಅಫ್ಸರ್ ಪಾಷಾನೊಂದಿಗೆ ಜಯೇಶ್‌ ಸಂಪರ್ಕ ಹೊಂದಿದ್ದಾನೆ ತನಿಖಾ ತಂಡಗಳು ಹೇಳಿವೆ.

ಪ್ರಸ್ತುತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಪಾಷಾಗೆ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕವಿದೆ. ಜಯೇಶ್‌ ಪೂಜಾರಿ ಪಾಷಾ ಜೊತೆ ಒಪ್ಪಂದ ಮಾಡಿಕೊಂಡು ಗಡ್ಕರಿಗೆ ಕರೆ ಮಾಡುವ ಯೋಜನೆ ರೂಪಿಸಿದ್ದ. ಈ ಬಗ್ಗೆ ಮಹಾರಾಷ್ಟ್ರ ವಿಶೇಷ ಕಾರ್ಯಪಡೆಯ ಸಿಬ್ಬಂದಿ ಹಿಂಡಲಗಾ ಜೈಲಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಜಯೇಶ್‌ ಪೂಜಾರಿ ಜ.14ರಂದು ಕೇಂದ್ರ ಸಚಿವರಿಗೆ 100 ಕೋಟಿ ರೂ. ನೀಡುವಂತೆ ಬೆದರಿಯೊಡ್ಡಿದ್ದ ಅಲ್ಲದೆ ಹಣ ನೀಡದಿದ್ದಲ್ಲಿ ಗಡ್ಕರಿ ಅವರ ಜನ ಸಂಪರ್ಕ ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ.

ಮಹಾರಾಷ್ಟ್ರ ಪೊಲೀಸರು ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದರು. ಬಳಿಕ ಮಾರ್ಚ್ 21 ರಂದು ಮತ್ತೊಮ್ಮೆ ಗಡ್ಕರಿ ಅವರ ಜನಸಂಪರ್ಕ್ ಕಚೇರಿಗೆ ಬೆದರಿಕೆ ಕರೆ ಬಂದಿದ್ದು, ಈ ವೇಳೆ 10 ಕೋಟಿ ರೂ.ಗೆ ಬೇಡಿಕೆ ಇರಿಸಿದ್ದರು. ನಿರಂತರ ಬೆದರಿಕೆ ಕರೆಗಳ ಬಳಿಕ ಮಾರ್ಚ್ 28 ರಂದು ಮಹಾರಾಷ್ಟ್ರ ಪೊಲೀಸರು ಪೂಜಾರಿಯನ್ನು ವಶಕ್ಕೆ ಪಡೆದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

Exit mobile version