ಉಡುಪಿ: ಕರಾವಳಿ ಅಭಿವೃದ್ಧಿಯ ಗುರಿ ಸಾಧನೆಗಾಗಿ ರಾಜಕೀಯದಲ್ಲಿ ಮತ್ತೆ ಸಕ್ರಿಯರಾಗಲು ನಿರ್ಧರಿಸಿದ ಮಾಜಿ ಸಚಿವ, ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾರ್ಚ್ 12ರಂದು(ಮಂಗಳವಾರ) ಸಂಜೆ 4 ಗಂಟೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ. ಮಂಗಳವಾರ ಅಥವಾ ಬುಧವಾರ ಬಿಡುಗಡೆಯಾಗಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಅವರಿಗೆ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.
ಈ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಕಾಂಗ್ರೆಸ್ ಪಕ್ಷ ಹಲವು ಸಮಯದಿಂದ ಬಲೆ ಬೀಸಿತ್ತು ಎಂದು ಹೇಳಲಾಗಿದೆ. ಆದರೂ ಈ ಬಗ್ಗೆ ಅವರು ಯಾವುದೇ ರೀತಿಯಲ್ಲೂ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ.
ವಾರದ ಹಿಂದಷ್ಟೇ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತಾನು ಸಹ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿ ಹೌದು. ಸದ್ಯಕ್ಕೆ ಯಾವ ಪಕ್ಷದಲ್ಲೂ ಕಾರ್ಯ ನಿರ್ವಹಿಸುತ್ತಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಜೊತೆ ಸಂಪರ್ಕದಲ್ಲಿದ್ದೇನೆ. ಆದರೆ ಯಾವ ಪಕ್ಷದಿಂದ ಕಣಕ್ಕಿಳಿಯಬೇಕು ಎಂಬುದನ್ನು ಈವರೆಗೆ ನಿರ್ಧರಿಸಿಲ್ಲ. ಇನ್ನೊಂದು ವಾರದೊಳಗೆ ನನ್ನ ನಿರ್ಧಾರ ತಿಳಿಸುವೆ ಎಂದು ಹೇಳಿದ್ದರು.