ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ (Rajnikanth) ಅಭಿನಯದ ಬ್ಲಾಕ್ ಬಸ್ಟರ್ ‘ಜೈಲರ್’ (Jailer) ಚಿತ್ರದಲ್ಲಿ ರಜನಿ ಸೇರಿದಂತೆ ಎಲ್ಲಾ ನಟರ ಅಭಿನಯ ಸಿನಿ ಪ್ರೇಕ್ಷಕರ ಗಮನ ಸೆಳೆದಿತ್ತು.
ಅದರಂತೆ ಈ ಚಿತ್ರದಲ್ಲಿ ಸೈಲೆಂಟ್ ಪಾತ್ರವೊಂದರಲ್ಲಿ ಮಿಂಚಿದ್ದ ತಮಿಳಿನ ಖ್ಯಾತ ನಿರ್ದೇಶಕ ಮತ್ತು ಕಿರುತೆರೆ ಹಾಗೂ ಹಿರಿತೆರೆಯ ಖ್ಯಾತ ಪೋಷಕ ನಟ G ಮಾರಿಮುತ್ತು (G Marimuthu) (58) ಇಂದು (ಸೆ.08) ಹಠಾತ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
‘ಇಥಿರ್ ನೀಚಾಲ್’ (Ethir Neechal) ಎಂಬ ಟಿವಿ ಕಾರ್ಯಕ್ರಮವೊಂದಕ್ಕೆ ಡಬ್ಬಿಂಗ್ ಮಾಡುವ ವೇಳೆ ಈ ನಟನಿಗೆ ಹಠಾತ್ ಹೃದಯಾಘಾತವಾಗಿದೆ ಎಂದು ವರದಿ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಮಾರಿಮುತ್ತು ಅವರು ತಮ್ಮ ಯೂಟ್ಯೂಬ್ ಕಾರ್ಯಕ್ರಮಗಳ ಮೂಲಕವೂ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದರು.
ಕಣ್ಣುಂ ಕಣ್ಣುಂ ಮತ್ತು ಪುಲಿವಾಲ್ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಮಾರಿಮುತ್ತು ಅವರು 2010ರ ಬಳಿಕ ನಟನೆಯ ಕಡೆಗೆ ಹೆಚ್ಚು ಗಮನಕೊಟ್ಟು ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದ್ದರು.
‘ಜೈಲರ್’ ಚಿತ್ರದಲ್ಲಿ ಖಳನಾಯಕ ವಿನಾಯಕ್ ಜೊತೆ ಪರದೆಯ ಮೇಲೆ ಕಾಣಿಸಿಕೊಂಡು ಮಾರಿಮುತ್ತು ಗಮನ ಸೆಳೆದಿದ್ದರು. ವಿಕ್ಷಿಪ್ತ ಮನಸ್ಸಿನ ವಿಲನ್ ವಿನಾಯಕ್ ಜೊತೆ ಸೈಲಂಟ್ ಸಾತ್ವಿಕ ಪಾತ್ರದ ಮಾರಿಮುತ್ತು ಕಾಂಬಿನೇಷನ್ ಈ ಚಿತ್ರದಲ್ಲಿ ವಿಶಿಷ್ಟವಾಗಿ ಮೂಡಿಬಂದಿತ್ತು.
ಮಾರಿಮುತ್ತು ಅವರು, ವಾಲಿ, ಕಣ್ಣುಂ ಕಣ್ಣುಂ, ಯುದ್ಧಂ, ಆರೋಹಣಂ, ಜೀವಾ, ಕೊಂಬನ್, ಕಿರುಮಿ, ಮಾಪ್ಲಾ ಸಿಂಗಂ, ತಿರುನಾಳ್, ಗಾಡ್ ಪಾದರ್, ಡುದ್ರ ತಾಂಡವಂ, ಐಪಿಸಿ 376, ಎನಿಮಿ, ಎಂಜಿಆರ್ ಮಗನ್, ವಿಕ್ರಂ, ಜೈಲರ್, ಇಂಡಿಯನ್ 2 ಸೇರಿದಂತೆ ತಮಿಳು, ಮಳಯಾಲಂ ಭಾಷೆಗಳ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದ್ದಾರೆ. ಇದರಲ್ಲಿ ಇಂಡಿಯನ್- 2 ಚಿತ್ರ ಇನ್ನಷ್ಟೇ ರಿಲೀಸ್ ಆಗಬೇಕಿದೆ.
ಈ ಹಿರಿಯ ನಟನ ಹಠಾತ್ ನಿಧನ ತಮಿಳು ಚಿತ್ರರಂಗಕ್ಕೆ ಆಘಾತ ತಂದಿದ್ದು, ಮಾರಿಮುತ್ತು ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿಯುತ್ತಿದೆ.