Site icon newsroomkannada.com

ನವರಾತ್ರಿ ಸಮಯದಲ್ಲಿ ಕೊರಗ ವೇಷ ಧರಿಸಿದರೆ ಜೈಲು ಶಿಕ್ಷೆ

ಮಂಗಳೂರು: ದಸರಾ ಉತ್ಸವ ಸಮಯದಲ್ಲಿ ಕೊರಗ ಜನಾಂಗದ ವೇಷ ಧರಿಸಿ ಅಂಗಡಿ, ಮನೆಗಳ ಮುಂದೆ ಕುಣಿದು ಜಾತಿ ನಿಂದನೆ ಮಾಡಿದರೆ ಜೈಲು ಶಿಕ್ಷೆ ವಿಧಿಸುವುದಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಅಮವಾಸ್ಯೆ ದಿನಗಳಲ್ಲಿ ಕೊರಗ ಜನಾಂಗದವರ ಹೆಂಗಸರಿಗೆ ಉಗುರು ತಲೆ ಕೂದಲುಗಳನ್ನು ಊಟದಲ್ಲಿ ಹಾಕಿ ಉಣಲು ನೀಡುವುದು, ಚಿಕ್ಕಮಕ್ಕಳಿಗೆ ಕಾಯಿಲೆ ಇದ್ದಾಗ ಕೊರಗ ಜನಾಂಗದ ಮಹಿಳೆಯನ್ನು ಕರೆದು ಆ ಮಗುವಿಗೆ ಹಾಲು ಉಣಿಸಲು ಬಳಸಿಕೊಂಡು ಮಗುವಿನ ಕಾಯಿಲೆಯನ್ನು ಕೊರಗ ಜನಾಂಗದವರಿಗೆ ಹರಡುವಂತೆ ಮಾಡುವುದು ನಿಷೇಧಿಸಲಾಗಿದೆ.

ಜಿಲ್ಲೆಯ ಜಾನಪದ ಕ್ರೀಡೆಯಾದ ಕಂಬಳದಲ್ಲಿ ಕಂಬಳದ ಹಿಂದಿನ ದಿನ ಕಂಬಳದ ಕೆರೆಯಲ್ಲಿ ಕುಪ್ಪಿ ಚೂರು, ಮುಳ್ಳು ಮುಂತಾದವು ಇರುವ ಬಗ್ಗೆ ಕಂಬಳದ ಹಿಂದಿನ ದಿನ ಕಂಬಳದ ಕರೆಯಲ್ಲಿ ಕೊರಗ ಜನಾಂಗದವರನ್ನು ಬಳಸಿಕೊಳ್ಳುವುದು, ಜಾತ್ರೆ, ಕಂಬಳ ಮತ್ತಿತರ ಸಾರ್ವಜನಿಕ ಸಮಾರಂಭಗಳಲ್ಲಿ ಕೊರಗ ಜನಾಂಗದವರನ್ನು ಡೋಲು ಬಡಿಸಿ ಕುಣಿತಕ್ಕೆ ಬಳಸಿಕೊಳ್ಳುವುದು ನಿಷೇಧಿಸಲಾಗಿದೆ.

ಬೇರೆ ಜನಾಂಗದವರ ಹೆಂಗಸರಿಗೆ ಸೀಮಂತದ ದಿನ ಕೊರಗ ಜನಾಂಗದ ಮಹಿಳೆಯನ್ನು ಕರೆದು ಎಂಜಲು ಊಟ ಮಾಡಿಸಿ ಸೀಮಂತ ಹೆಣ್ಣಿನ ಮೇಲಿರುವ ದೃಷ್ಟಿ ತೆಗೆಯಲು ಬಳಸಿಕೊಳ್ಳುವುದು ನಿಷೇಧಿಸಲಾಗಿದೆ.

ಈ ರೀತಿಯ ಚಟುವಟಿಕೆಗಳು ಕೊರಗರ ಅಜಲು ಪದ್ಧತಿ ನಿಷೇಧ ಕಾಯಿದೆಯಡಿ ಬರುವುದರಿಂದ ಇಂತಹ ಆಚರಣೆಗಳು ಕಂಡುಬಂದಲ್ಲಿ ಅಂತಹ ಪ್ರಕರಣಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲೆ ದೌರ್ಜನ್ಯ ನಿಷೇಧ ಅಧಿನಿಯಮ 1989ರ ಅಡಿಯಲ್ಲಿ ನೋಂದಾಯಿಸಿ ಕಾನೂನು ಕ್ರಮ ಜರುಗಿಸಲಾಗುವುದು. 5ರಿಂದ 6 ವರ್ಷಗಳ ವರೆಗೆ ಕಾರಾಗೃಹವಾಸ ಮತ್ತು 5000 ರೂ. ದಂಡ ವಿಧಿಸಲಾಗುವುದು. ಇಂತಹ ಪ್ರಸಂಗ ಪತ್ತೆಯಾದಲ್ಲಿ ಸ್ಥಳೀಯ ಪೊಲೀಸ್‌ ಠಾಣೆಗೆ ತಿಳಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ದಸರಾ ಉತ್ಸವ ಸಂದರ್ಭದಲ್ಲಿ ವಿವಿಧ ರೀತಿಯ ವೇಷಗಳನ್ನು ಹಾಕಿ ಕುಣಿಯುವುದು ಸಂಪ್ರದಾಯದ ನೆಲೆಯಲ್ಲಿ ನಡೆದುಬಂದಿದೆ. ಕೊರಗ ವೇಷ ನಿಷೇಧ ಇದ್ದರೂ ಕೆಲವು ಹಳ್ಳಿಗಳಲ್ಲಿ ಹರಕೆ ನೆಪದಲ್ಲಿ ಇಂತಹ ವೇಷಗಳನ್ನು ಹಾಕುವುದನ್ನು ಮುಂದುವರಿಸಲಾಗಿದೆ.

Exit mobile version