‘ಜೈ ಸಿಯಾರಾಮ’ ಹೇಳಿ ಮೌನ ವ್ರತ ಕೊನೆಗೊಳಿಸಲಿದ್ದಾರೆ 85 ವರ್ಷದ ಸರಸ್ವತಿ ದೇವಿ
ಧನಬಾದ್: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ವಣಕ್ಕಾಗಿ ಬಿಹಾರದ ಧನಬಾದ್ನ 85 ವರ್ಷದ ವೃದ್ಧೆ ಸರಸ್ವತಿ ದೇವಿ ಕಳೆದ 31 ವರ್ಷಗಳಿಂದ (1992) ಮೌನವ್ರತ ಆಚರಿಸುತ್ತಿದ್ದಾರೆ. ಜನವರಿ 22ರಂದು ಮಂದಿರ ಉದ್ಘಾಟನೆಗೊಂಡ ಬಳಿಕ, ‘ಜೈ ಸಿಯಾರಾಮ’ ಹೇಳಿ, ಅವರು ಮೌನವ್ರತವನ್ನು ಕೊನೆಗೊಳಿಸಲಿದ್ದಾರೆ.
ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಇವರಿಗೆ ಆಹ್ವಾನ ಬಂದಿದೆ. ‘ನನ್ನ ಜೀವನ ಧನ್ಯವಾಗಿದೆ. ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರಾಮನ ದರ್ಶನ ಪಡೆಯುವೆ, ಅಲ್ಲಿಗೆ ನನ್ನ ಮೂರು ದಶಕಗಳ ಮೌನ ಮುಗಿಯಲಿದೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ ಸರಸ್ವತಿ ದೇವಿ. 1992ರಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದ ಇವರು ರಾಮ ಜನ್ಮಭೂಮಿ ನ್ಯಾಸ್ನ ಪ್ರಮುಖರಾದ ಮಹಂತ ನೃತ್ಯಗೋಪಾಲ್ ದಾಸ್ ಅವರನ್ನು ಭೇಟಿಯಾಗಿದ್ದರು. ಅವರಿಂದ ಸಿಕ್ಕ ಪ್ರೇರಣೆಯಿಂದ, ರಾಮ ಮಂದಿರ ನಿರ್ವಣದವರೆಗೆ ಮೌನವ್ರತ ಆಚರಿಸಲು ಸಂಕಲ್ಪಿಸಿದ್ದರು. ಮೌನವ್ರತದಲ್ಲಿರುವಾಗಲೇ ಚಾರ್ಧಾಮ್ ಯಾತ್ರೆಯನ್ನೂ ಪೂರ್ಣಗೊಳಿಸಿದ್ದಾರೆ.