ಹುಬ್ಬಳ್ಳಿ, ಏ 20: ನನ್ನ ಮಗ ಮಾಡಿರುವ ತಪ್ಪಿಗೆ ರಾಜ್ಯದ ಜನರ ಮುಂದೆ ಕ್ಷಮೆಯಾಚಿಸುತ್ತೇನೆ. ನೇಹಾಳ ತಂದೆ – ತಾಯಿಗೂ ನಾನು ಕ್ಷಮೆ ಕೇಳುತ್ತೇನೆ. ನೇಹಾ ಕೂಡ ನನ್ನ ಮಗಳು ಇದ್ದಂಗೆ, ನನ್ನ ಮಗ ಮಾಡಿರುವ ತಪ್ಪಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಫಯಾಜ್ ತಾಯಿ ಮುಮ್ತಾಜ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನೇಹಾಳ ತಂದೆ-ತಾಯಿಗೆ ಆಗಿರುವಷ್ಟೇ ದುಃಖ ನನಗೂ ಆಗಿದೆ. ಯಾರು ಮಾಡಿದ್ರೂ ತಪ್ಪೇ ತಪ್ಪು, ನನ್ನ ಮಗ ಮಾಡಿರೋದು ತಪ್ಪೇ. ಈ ನೆಲದ ಕಾನೂನು ಏನು ಶಿಕ್ಷೆ ಕೊಡುತ್ತೋ ಅದನ್ನು ಕೊಡಬೇಕು. ನಾನು ನೂರಾರು ಮಕ್ಕಳಿಗೆ ತಪ್ಪು ಮಾಡಿದ್ರೆ ಶಿಕ್ಷೆ ಕೊಡ್ತೀನಿ, ಅದೇ ರೀತಿ ಅವನಿಗೂ ಶಿಕ್ಷೆಯಾಗಬೇಕು. ಅವನು ಮಾಡಿರೋ ಕೆಲಸದಿಂದ ನಾನು ಎಲ್ಲರ ಮುಂದೆ ತಲೆ ತಗ್ಗಿಸುವ ರೀತಿ ಆಗಿದೆ. ನಾನು ಇಡೀ ರಾಜ್ಯದ ಜನತೆಗೆ ಕ್ಷಮೆ ಕೇಳ್ತೀನಿ ಎಂದು ಹೇಳಿದರು.
ನನ್ನ ಮಗ ಹಾಗೂ ನೇಹಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನನಗೆ ಒಂದು ವರ್ಷದ ಹಿಂದೆಯೇ ಈ ವಿಷಯ ಗೊತ್ತಾಗಿತ್ತು. ಫಯಾಜ್ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಯೂನಿವರ್ಸಿಟಿ ಬ್ಲೂ ಆದಾಗ ನೇಹಾ ಪರಿಚಯ ಆಗಿ, ಅದು ಪ್ರೀತಿಗೆ ತಿರುಗಿತ್ತು. ಅದನ್ನು ನನಗೆ ಹೇಳಿದ್ದ. ಆಗ ನಾನು ಈ ಪ್ರೀತಿ, ಗೀತಿ ಬೇಡ ಎಂದು ಹೇಳಿದ್ದೆ. ಆದರೆ, ಈ ರೀತಿ ಆಯ್ತು ಎಂದು ತಿಳಿಸಿದರು.
ಫಯಾಜ್ ಬುದ್ಧಿವಂತ ಹುಡುಗ ಇದ್ದ, ಅವನನ್ನು ಐಎಎಸ್ ಆಫೀಸರ್ ಮಾಡ್ಬೇಕು ಅನ್ಕೊಂಡಿದ್ದೆ. ಆದರೆ, ಈ ಪ್ರೀತಿಯಲ್ಲಿ ಬಿದ್ದು ಜೀವನವನ್ನು ಹಾಳು ಮಾಡಿಕೊಂಡ ಎಂದ ಅವರು, ನೇಹಾಳೇ ಫಯಾಜ್‌ಗೆ ಮೊದಲು ಪ್ರಪೋಸ್ ಮಾಡಿದ್ದಳು. ಅವರಿಬ್ಬರ ನಡುವೆ ಪ್ರೀತಿ ಇತ್ತು, ಅದು ಒನ್ ಸೈಡ್ ಲವ್ ಅಲ್ಲ, ಇಬ್ಬರ ಕಡೆಯಿಂದಲೂ ಪ್ರೀತಿ ಇತ್ತು. ಆ ಹುಡುಗಿನೂ ಒಳ್ಳೆ ಹುಡುಗಿ, ಇಬ್ಬರು ಕೂಡ ಮದುವೆ ಆಗ್ತೀವಿ ಅಂದಿದ್ರು ಎಂದು ಹೇಳಿದರು.