main logo

IT RAID: ಗುತ್ತಿಗೆದಾರನ ಫ್ಲ್ಯಾಟ್ ನಲ್ಲಿ ಮಂಚದಡಿಯಲ್ಲಿ ಸಿಕ್ತು ಕಂತೆ-ಕಂತೆ ನೋಟು!

IT RAID: ಗುತ್ತಿಗೆದಾರನ ಫ್ಲ್ಯಾಟ್ ನಲ್ಲಿ ಮಂಚದಡಿಯಲ್ಲಿ ಸಿಕ್ತು ಕಂತೆ-ಕಂತೆ ನೋಟು!

ಬೆಂಗಳೂರು: ಕಳೆದ ವಾರ ಆದಾಯ ತೆರಿಗೆ (Income Tax Department) ಅಧಿಕಾರಿಗಳು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿದ್ದರು. ಗುರುವಾರ ಮತ್ತೆ ಆರ್​ಟಿ ನಗರದ (RT Nagar) ಎರಡು ಸ್ಥಳಗಳ ಮೇಲೆ ಐಟಿ ದಾಳಿ ನಡೆದಿದ್ದು, ಆತ್ಮಾನಂದ ಕಾಲೋನಿಯ ಫ್ಲಾಟ್ ಒಂದರ ಕೊಠಡಿಯಲ್ಲಿದ್ದ ಮಂಚದಡಿ ಬಚ್ಚಿಟ್ಟಿದ್ದ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.

ಫ್ಲಾಟ್​ನಲ್ಲಿ ಬರೊಬ್ಬರಿ 23 ಬಾಕ್ಸ್​ಗಳಲ್ಲಿ 500 ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಕಾರಿನಲ್ಲಿ ಹಣ ಸಾಗಾಟ ಮಾಡಲು ತಯಾರಾಗಿತ್ತು ಎಂದು ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಪೊಲೀಸ್ ಸಿಬ್ಬಂದಿಗಳ ಭದ್ರತೆಯಲ್ಲಿ ಐಟಿ ಅಧಿಕಾರಿಗಳು ಏಕಕಾಲದಲ್ಲಿ ಆರ್​ಟಿ ನಗರದ ಎರಡು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.

ಆತ್ಮಾನಂದ ಕಾಲೋನಿಯ ಒಂದು ಫ್ಲಾಟ್​ನ ಕೊಠಡಿಯೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮಂಚದಡಿ ಪರಿಶೀಲನೆ ನಡೆಸಿದಾಗ ಕೋಟ್ಯಂತರ ರೂಪಾಯಿ ಪತ್ತೆಯಾಗಿದೆ. ಪತ್ತೆಯಾದ ಹಣದ ಒಟ್ಟಾರೆ ಮೊತ್ತ ಎಣಿಕೆ ಮಾಡಿದ ಐಟಿ ಅಧಿಕಾರಿಗಳು, ಬಳಿಕ ಮಾಜಿ ಕಾರ್ಪೋರೇಟರ್​ ಮನೆ ಬಾಗಿಲು ತಟ್ಟಿದ್ದಾರೆ.

ಗಣೇಶ ಬ್ಲಾಕ್​ನಲ್ಲಿರುವ ವಾರ್ಡ್ ನಂ 95ರ ಮಾಜಿ ಕಾರ್ಪೊರೇಟರ್ ಅಶ್ವತಮ್ಮ ಹಾಗೂ ಆರ್. ಅಂಬಿಕಾಪತಿ ದಂಪತಿಗಳ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ, ಫ್ಲಾಟ್​ನಲ್ಲಿ ಪತ್ತೆಯಾದ ಕೋಟ್ಯಂತರ ರೂಪಾಯಿ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಅಸಲಿಗೆ ಹಣ ಪತ್ತೆಯಾದ ಫ್ಲ್ಯಾಟ್ ಯಾರದ್ದು? ಗುಟ್ಟು ಬಿಟ್ಟು ಕೊಡದ ಐಟಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ಫ್ಲಾಟ್​ನ ಬೆಡ್ ರೂಮ್​ನ ರೂಮ್​ವೊಂದರ ಮಂಚದ ಅಡಿಯಲ್ಲಿ ಹಣ ಬಚ್ಚಿಟ್ಟ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಈ ರೂಮ್​ ಅನ್ನು ಬಳಸುತ್ತಾ ಇರಲಿಲ್ಲ, ಬೀಗ ಹಾಕಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಕಾಂಟ್ರಾಕ್ಟರ್ ಆಗಿರುವ ಆರ್. ಅಂಬಿಕಾಪತಿ ಕೆಂಪಣ್ಣ ಅವರ ಕಾಂಟ್ರಾಕ್ಟರ್ ಸಂಘದಲ್ಲಿ ಗುರುತಿಸಿಕೊಂಡಿದ್ದರು. ಫ್ಲಾಟ್​ನಲ್ಲಿ ಸಿಕ್ಕ ಹಣದ ಹಿಂದೆ ಐಟಿಗೆ ದೊಡ್ಡ ಅನುಮಾನ ವ್ಯಕ್ತವಾಗಿದೆ. ಹಣ ಒಂದೇ ಕಡೆ ಸಂಗ್ರಹಣೆ ಹಿಂದಿದೆಯಾ ಚುನಾವಣೆ ತಯಾರಿ? ಪಂಚರಾಜ್ಯಗಳ ಚುನಾವಣೆಗಾಗಿ ಸಂಗ್ರಹಿಸಲಾಗಿತ್ತೇ ಈ ಹಣ ಎಂಬ ಅನುಮಾನ ಕಾಡಿದೆ.

ಬಿಜೆಪಿ ಸರ್ಕಾರದ ವಿರುದ್ಧ ಆರ್​ ಅಂಬಿಕಾಪತಿ ಅವರು 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು. ರಾಜ್ಯದಲ್ಲಿ ನಡೆಯುವ ಕಾಮಗಾರಿಗೆ ಶೇ.40, ಬಿಬಿಎಂಪಿಯಲ್ಲಿ 50 ಪರ್ಸೆಂಟ್ ನೀಡಬೇಕು ಎಂದು ಹೇಳಿ ಕೆಲವು ರಾಜಕೀಯ ನಾಯಕರ ಮೇಲೆ ಗಂಭೀರ ಆರೋಪ ಮಾಡಿದ್ದರು. ಕೆಲವು ರಾಜಕೀಯ ವ್ಯಕ್ತಿಗಳ ವಿರುದ್ಧ ಆರೋಪ ಮಾಡಿದ್ದರು.

Related Articles

Leave a Reply

Your email address will not be published. Required fields are marked *

error: Content is protected !!