Site icon newsroomkannada.com

ಶಹಬ್ಬಾಸ್ ISRO: ನಭಕ್ಕೆ ಜಿಗಿಯಿತು ‘ಆದಿತ್ಯ–L1’–ಯಶಸ್ವಿಯಾಗಲಿ ‘ಸೂರ್ಯ ಶಿಕಾರಿ’

ಶ್ರೀಹರಿಕೋಟ: ಚಂದ್ರನ (Moon) ದಕ್ಷಿಣ ಧ್ರುವದಲ್ಲಿ (South Poll) ತನ್ನ ಲ್ಯಾಂಡರನ್ನು ಯಶಸ್ವಿಯಾಗಿ ಇಳಿಸಿ ವಿಶ್ವದ ಗಮನ ಸೆಳೆದಿರುವ ಇಸ್ರೋ (ISRO) ಇದೀಗ ತನ್ನ ಮಹತ್ವಾಕಾಂಕ್ಷಿ ‘ಸೂರ್ಯ ಶಿಕಾರಿ’ ಯೋಜನೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ.

ಇಲ್ಲಿನ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ (Satish Dhawan Space Centre) ಆದಿತ್ಯ – ಎಲ್1 (Aditya – L1) ನೌಕೆಯನ್ನು ಹೊತ್ತ PSLV – C57 (PSLV-C57) ರಾಕೆಟ್ ಯಶಸ್ವಿಯಾಗಿ ನಭಕ್ಕೆ ಜಿಗಿದಿದೆ. ಎಲ್ಲವೂ ಅಂದುಕೊಂಡಂತೇ ಸಾಗಿದಲ್ಲಿ ಈ ಆದಿತ್ಯ-ಎಲ್1 ನೌಕೆ ಇನ್ನು 125 ದಿನಗಳಲ್ಲಿ ತನ್ನ ನಿರ್ಧಿಷ್ಟ ಗುರಿಯನ್ನು ತಲುಪಲಿದೆ.

ರಾಕೆಟ್ ಉಡ್ಡಯನದ ಮೂರೂ ಹಂತಗಳು ಯಶಸ್ವಿಯಾಗುವ ಮೂಲಕ ಆದಿತ್ಯ- ಎಲ್ 1 ನೌಕೆ ಯಶಸ್ವಿಯಾಗಿ ಭೂ ಕಕ್ಷೆಯನ್ನು ಸೇರಿಕೊಂಡಿದೆ.

ಆದಿತ್ಯ ಎಲ್-1 ಗಗನ ನೌಕೆ ಸೂರ್ಯನ ಬಾಹ್ಯ ವಾತಾವರಣದ (ಸೋಲಾರ್ ಕೊರೊನಾ) ಮಾಹಿತಿಯನ್ನು ಮತ್ತು ಎಲ್-1 (ಸೂರ್ಯ-ಭೂಮಿಯ ಸಮಾನ ಧ್ರುವ ಪ್ರದೇಶ)ನಲ್ಲಿ ಸೌರ ಮಾರುತಗಳ ಮಾಹಿತಿಯನ್ನೂ ಕಲೆಹಾಕಲಿದೆ. ಈ ಎಲ್-1 ಕೇಂದ್ರ ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ (15 ಲಕ್ಷ) ದೂರದಲ್ಲಿದೆ.


ಈ ಯೋಜನೆ ಯಶಸ್ವಿಯಾದ ಪಕ್ಷದಲ್ಲಿಸೂರ್ಯ ಮತ್ತು ಭೂಮಿಯ ಐದು ಲ್ಯಾಗ್ರೇಂಜ್ ಪಾಯಿಂಟ್ ಗಳಲ್ಲಿ ಒಂದು ಪಾಯಿಂಟ್ ಗೆ ಆದಿತ್ಯ ಎಲ್-1 ಪ್ರವೇಶಿಸಲಿದೆ ಮತ್ತು ಅಲ್ಲಿಂದ, ಈ ನೌಕೆ ಸೂರ್ಯನ ಸ್ಪಷ್ಟ ಚಿತ್ರಗಳನ್ನು ಮತ್ತು ಭೂಮಿ ಹಾಗೂ ಇತರೇ ಗ್ರಹಗಳ ಸಮೀಪ ವಾತಾವರಣ ಸ್ಥಿತಿಯ ಮೇಲೆ ಇವುಗಳ ಪರಿಣಾಮವನ್ನು ಅಧ್ಯಯನ ಮಾಡಲಿದೆ. ಇದರ ಜೊತೆ ಇನ್ನೂ ಹತ್ತು ಹಲವು ಮಾಹಿತಿಗಳನ್ನು ಈ ಯೋಜನೆಯ ಮೂಲಕ ಪಡೆದುಕೊಳ್ಳುವ ಉದ್ದೇಶವನ್ನು ಇಸ್ರೋ ಹಾಕಿಕೊಂಡಿದೆ.

Exit mobile version