ಬೆಂಗಳೂರು: ರಾಕೆಟ್ ಉಡ್ಡಯನ ಸಂದರ್ಭದಲ್ಲಿ ‘ಕೌಂಟ್ ಡೌನ್’ ಧ್ವನಿಯನ್ನು ನೀವು ಕೇಳಿಯೇ ಇರುತ್ತೀರಿ, ಇಸ್ರೋ ನಭಕ್ಕೆ ಹಾರಿಬಿಟ್ಟ ಹಲವು ರಾಕೆಟ್ ಉಡ್ಡಯನಗಳಿಗೆ ‘ಕೌಂಟ್ ಡೌನ್’ ಧ್ವನಿ ನೀಡಿದ್ದ ಇಸ್ರೋ ವಿಜ್ಞಾನಿಯೊಬ್ಬರು ಇದೀಗ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
ಇಸ್ರೋ ವಿಜ್ಞಾನಿಯಾಗಿದ್ದ ವಲರ್ಮತಿ ಅವರೇ ‘ಕೌಂಟ್ ಡೌನ್’ ಧ್ವನಿಯ ಹಿಂದಿದ್ದ ವಿಜ್ಞಾನಿಯಾಗಿದ್ದು, ಚಂದ್ರಯಾನ 3ರಲ್ಲಿ ರಾಕೆಟ್ ಉಡ್ಡಯನ ಸಂದರ್ಭದಲ್ಲಿ ಇವರು ನೀಡಿದ್ದ ಧ್ವನಿಯೇ ಅವರ ಕೊನೆಯ ಕೌಂಟ್ ಡೌನ್ ಧ್ವನಿಯಾಗಿದ್ದು ಮಾತ್ರ ವಿಪರ್ಯಾಸವೇ ಸರಿ.
ರಾಕೆಟ್ ಉಡ್ಡಯನ ಸಂದರ್ಭದಲ್ಲಿ ‘ಕೌಂಟ್ ಡೌನ್’ ಸ್ವರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಈ ಕೆಲಸವನ್ನು ತನ್ನ ಗಂಭೀರ ಸ್ವರದಿಂದ ನಿರ್ವಹಿಸುವ ಮೂಲಕ ಅದಕ್ಕೊಂದು ಘನತೆ ತಂದುಕೊಟ್ಟಿದ್ದ ವಲರ್ಮತಿ ಅವರು ಶನಿವಾರ (ಸೆ.02) ರಾತ್ರಿ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾದರು.
ವಲರ್ಮತಿ ಅವರು ಚಂದ್ರಯಾನ 3 ಸೇರಿದಂತೆ ಇಸ್ರೋ ಕೈಗೊಂಡ ಹಲವು ರಾಕೆಟ್ ಉಡ್ಡಯನ ಮತ್ತು ಪ್ರಯೋಗಗಳ ಉಸ್ತುವಾರಿ ವಹಿಸಿದ್ದರು.
ಆದರೆ, ಜುಲೈ 14ರಂದು ಶ್ರೀಹರಿಕೋಟದಿಂದ ನಭಕ್ಕೇರಿದ್ದ ಚಂದ್ರಯಾನ 3ಕ್ಕೆ ‘ಕೌಂಟ್ ಡೌನ್’ ಧ್ವನಿ ನೀಡಿದ್ದೇ ವಲರ್ಮತಿ ಅವರು ನೀಡಿದ್ದ ಅಂತಿಮ ಧ್ವನಿಯಾಗಿತ್ತು.
ವಲರ್ಮತಿ ಅವರು 1959ರಲ್ಲಿ ತಮಿಳುನಾಡಿನ ಅರಿಯಲೂರಿನಲ್ಲಿ ಜನಿಸಿದ್ದರು. 1984ರಿಂದ ಅವರು ಇಸ್ರೋದಲ್ಲಿ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ವಲರ್ಮತಿ ಅವರಿಗೆ 2015ರಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೆಸರಿನಲ್ಲಿ ಕೊಡಮಾಡುವ ಪ್ರಶಸ್ತಿ ಲಭಿಸಿತ್ತು.