Site icon newsroomkannada.com

‘ಇದ್ರಲ್ಲೇ ನಾನಿಲ್ಲಿಗೆ ಬಂದಿದ್ದು..’ – ವಿಕ್ರಂ ಲ್ಯಾಂಡರ್ ಫೊಟೋ ಸೆಂಡ್ ಮಾಡಿದ ಪ್ರಗ್ಯಾನ್!

ಬೆಂಗಳೂರು: ಚಂದ್ರನ (Moon) ನೆಲದಲ್ಲಿ ಲ್ಯಾಂಡ್ ಆದ ವಿಕ್ರಂ ಲ್ಯಾಂಡರ್ (Vikram Lander) ನಿಂದ ಹೊರಬಂದ ಪ್ರಗ್ಯಾನ್ ರೋವರ್ (Pragyan Rover) ಶಶಿಯಂಗಳದಲ್ಲಿ ಚುರುಕಿನಿಂದ ತಿರುಗಾಡುತ್ತಿದ್ದು, ಹಲವು ಪ್ರಮುಖ ಮಾಹಿತಿಗಳನ್ನು ಭೂಮಿಯಲ್ಲಿರುವ ತನ್ನ ನಿಯಂತ್ರಣ ಕೇಂದ್ರಕ್ಕೆ ರವಾನಿಸುತ್ತಿದೆ.

ಈ ನಡುವೆ ತಾನು ಚಂದ್ರನ ನೆಲಕ್ಕೆ ಬಂದಿಳಿಯಲು ಕಾರಣವಾಗಿರುವ ವಿಕ್ರಂ ಲ್ಯಾಂಡರ್ ನ ಫೋಟೊ ಒಂದನ್ನು ಪ್ರಗ್ಯಾನ್ ತೆಗೆದಿದ್ದು ಅದನ್ನು ಬುಧವಾರದಂದು (ಆ.30) ಇಸ್ರೋ (ISRO) ಬಿಡುಗಡೆ ಮಾಡಿದೆ.

ಇಸ್ರೋ ತನ್ನ ಅಧಿಕೃತ ‘ಎಕ್ಸ್’ (X) (ಈ ಹಿಂದೆ ಟ್ವಿಟ್ಟರ್ ಆಗಿತ್ತು) ಖಾತೆಯಲ್ಲಿ ನೀಡಿರುವ ಮಾಹಿತಿಯಂತೆ, ‘ಪ್ರಗ್ಯಾನ್ ರೋವರ್ ಚಂದಿರನ ನೆಲದಲ್ಲಿ ಅಂದಾಜು 15 ಮೀಟರ್ ಗಳಷ್ಟು ಸಂಚರಿಸಿದ್ದು, ಈ ನಡುವೆ ವಿಕ್ರಂ ಲ್ಯಾಂಡರ್ ಕಾಣುತ್ತಿರುವ ಫೊಟೋ ಒಂದನ್ನು ಕಳುಹಿಸಿದೆ’ ಎಂದು ಹೇಳಿದೆ.

ಪ್ರಗ್ಯಾನ್ ರೋವರ್ ಚಂದಿರನಂಗದಳಲ್ಲಿ ತೆಗೆದು ಕಳುಹಿಸಿರುವ ಹಲವು ಫೊಟೋಗಳನ್ನು ಈಗಾಗಲೇ ಇಸ್ರೋ ಬಿಡುಗಡೆ ಮಾಡಿದೆ.

ಪ್ರಗ್ಯಾನ್ ರೋವರ್ ನ ಮುಂಭಾಗದಲ್ಲಿ ಎರಡು ನ್ಯಾವಿಗೇಷನ್ ಕೆಮರಾಗಳನ್ನು ಅಳವಡಿಸಲಾಗಿದ್ದು, ಇದು ಅಲ್ಲಿಂದ ಕಳುಹಿಸುವ ಮಾಹಿತಿಗಳು ಅಹಮದಾಬಾದ್ ನಲ್ಲಿರುವ ಇಸ್ರೋ ದ ಸ್ಪೇಸ್ ಅಪ್ಲಿಕೇಶನ್ಸ್ ಸೆಂಟರ್ ನಲ್ಲಿ ಸಂಸ್ಕರಣೆಗೊಳಪಡುತ್ತದೆ.

ಈ ಫೊಟೋಗಳನ್ನು ಇಸ್ರೋ ತನ್ನ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಗಡಿಗಳನ್ನು ಮೀರಿ, ಚಂದಿರನ ನೆಲದಲ್ಲಿ : ಭಾರತದ ಸಾರ್ವಭೌಮತೆಗೆ ಗಡಿಗಳಿಲ್ಲ! ಮತ್ತೊಮ್ಮೆ, ಪ್ರಗ್ಯಾನ್ ‘ವಿಕ್ರಮ್’ ನ್ನು ಇಂದು ಐ.ಎಸ್.ಟಿ. ಕಾಲಮಾನ ಬೆಳಿಗ್ಗೆ 11 ಗಂಟೆಗೆ ಸುಮಾರು 15 ನಿಮಿಷಗಳ ಕಾಲ ಸೆರೆ ಹಿಡಿದಿದೆ.’ ಎಂದು ಇಸ್ರೋ ಮಾಹಿತಿ ನೀಡಿದೆ.


ಪ್ರಗ್ಯಾನ್ ಸೆರೆ ಹಿಡಿದು ಕಳಿಸಿರುವ ವಿಕ್ರಮ್ ಲ್ಯಾಂಡರ್ ನ ಫೊಟೋದಲ್ಲಿ ಕಾಣುತ್ತಿರುವಂತೆ ಈ ಲ್ಯಾಂಡರ್ ನ ಎರಡು ಪ್ರಮುಖ ಉಪಕರಣಗಳ ಚಿತ್ರವೂ ಕಾಣಿಸುತ್ತಿದ್ದು, ಅದರಲ್ಲಿ ಒಂದು, ಚಂದ್ರನ ನೆಲದ ಉಷ್ಣತೆಯನ್ನು ಪರೀಕ್ಷಿಸುವ  ‘ಚಾಸ್ಟ್’ (ChaSTE) ಮತ್ತು ಲೂನಾರ್ ಸೆಸ್ಮಿಕ್ ಆಕ್ಟಿವಿಟಿ ಪ್ರೋಬ್ (ILSA) ಉಪಕರಣಗಳಾಗಿವೆ.

Exit mobile version