newsroomkannada.com

‘ಕಟ್ಟ ಕಡೆಯ ಹಮಾಸ್ ಉಗ್ರನನ್ನು ಹೊಡೆದುರುಳಿಸುವ ತನಕ ವಿರಮಿಸೆವು..!’- ಇಸ್ರೇಲ್ ಶಪಥ

ಟೆಲ್ ಅವಿವ್: ಗಾಜಾ (Gaza) ಮೇಲೆ ಪ್ಯಾಲಸ್ತೇನ್ (Palestin)ನ ಹಮಾಸ್ ಉಗ್ರರು ನಡೆಸಿದ ಸರಣಿ ರಾಕೆಟ್ ದಾಳಿ ಇದೀಗ ಇಸ್ರೇಲನ್ನು (Israel) ಕೆರಳಿಸಿದ್ದು, ಇದೀಗ ಗಾಜಾದಲ್ಲಿ ಮತ್ತು ತನ್ನ ನೆಲದಲ್ಲಿರುವ ತನ್ನವರನ್ನು ಉಳಿಸಲು ಮತ್ತು ಹಮಾಸ್ (Hamas) ಎಂಬ ನರರಾಕ್ಷಸರ ಪಡೆಯನ್ನು ಹೆಡೆಮುರಿ ಕಟ್ಟಲು ಇಸ್ರೇಲ್ ಪಣ ತೊಟ್ಟಿದೆ.

ಶನಿವಾರ  (ಅ.07)ರಂದು ನಡೆದ ಈ ಅನಿರೀಕ್ಷಿತ ರಾಕೆಟ್ ದಾಳಿ ಮತ್ತು ಉಗ್ರ ದಾಳಿಯ ಬೆನ್ನಲ್ಲೇ ದೇಶಾದ್ಯಂತ ಯುದ್ಧ ಪರಿಸ್ಥಿತಿಯನ್ನು ಘೋಷಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಇದೀಗ ತನ್ನ ಸೇನೆಯ ಸಂಪೂರ್ಣ ಬಲವನ್ನು ಹಮಾಸ್ ಉಗ್ರ ನೆಲೆಗಳ ಮೇಲೆ ಎರಗಲು ಸೂಚನೆ ನೀಡಿದ್ದಾರೆ.

ಈ ನಡುವೆ, ಇಸ್ರೇಲ್ ತನ್ನ ಸೇನೆಯಲ್ಲಿನ ಒಂದು ಲಕ್ಷ ಮೀಸಲು ಪಡೆಗಳನ್ನು ಗಾಜಾದತ್ತ ಕಳುಹಿಸಿಕೊಟ್ಟಿದ್ದು, ‘ನಾವು ಈಗಾಗಲೇ ದಕ್ಷಿಣ ಇಸ್ರೇಲ್ ನತ್ತ ನಮ್ಮ ಮೀಸಲು ಪಡೆಯ ಒಂದು ಲಕ್ಷ ಮೀಸಲು ಪಡೆಗಳನ್ನು ನಿಯೋಜಿಸಲಿದ್ದೇವೆ.’ ಎಂದು ಇಸ್ರೇಲಿ ಮಿಲಿಟರಿ ವಕ್ತಾರ ಜೋನಾಥನ್ ಕಾಂಕ್ರಿಕಸ್ ‘ಎಕ್ಸ್’ ಅಕೌಂಟ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಒಂದರಲ್ಲಿ ತಿಳಿಸಿದ್ದಾರೆ.

‘ಈ ಯುದ್ಧವನ್ನು ಆದಷ್ಟು ಬೇಗ ಮುಗಿಸುವುದು ನಮ್ಮ ಕೆಲಸವಾಗಿದೆ, ಭವಿಷ್ಯದಲ್ಲಿ ಇಸ್ರೇಲಿ ನಾಗರಿಕರನ್ನು ಬೆದರಿಸಲು ಹಮಾಸ್ ಬಳಿ ಯಾವುದೇ ರೀತಿಯ ಮಿಲಿಟರಿ ಸಾಮರ್ಥ್ಯವಿಲ್ಲದಂತೆ ಈ ಬಾರಿ ನಾವು ಮಾಡುತ್ತೇವೆ.  ಮಾತ್ರವಲ್ಲದೇ ಗಾಜಾ ಪಟ್ಟಿಯಲ್ಲಿ ಹಮಾಸ್ ಆಡಳಿತ ಸಾಧ್ಯವಾಗದಂತೆ ಮಾಡುವುದೇ ನಮ್ಮ ಗುರಿ’ ಎಂದು ಜೋನಾಥನ್ ಉಗ್ರ ಸಂಘಟನೆಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಇನ್ನು ದಕ್ಷಿಣ ಇಸ್ರೇಲ್ ಭಾಗಕ್ಕೆ ನುಸುಳಿರುವ ಕಟ್ಟ ಕಡೆಯ ಪ್ಯಾಲಸ್ತೀನ್ ಉಗ್ರರನ್ನು ಹೊಡೆದುರುಳಿಸುವವರೆಗೆ ವಿರಮಿಸುವುದಿಲ್ಲ ಎಂದು ಇಸ್ರೇಲ್ ಸೇನೆ ಶಪಥ ಮಾಡಿದೆ.

ಒಟ್ಟಿನಲ್ಲಿ ವಿಶ್ವದಲ್ಲೇ ಬಲಿಷ್ಠ ಮಿಲಿಟರಿ ಮತ್ತು ಗೂಢಚಾರಿಕೆ ವ್ಯವಸ್ಥೆಯನ್ನು ಹೊಂದಿರುವ ಇಸ್ರೇಲ್ ಮೇಲೆ ಕಾಲು ಕೆರೆದು ಜಗಳಕ್ಕೆ ಹೋಗಿರುವ ಹಮಾಸ್ ಸ್ಥಿತಿ ಈ ಬಾರಿ ಏನಾಗಲಿದೆ ಎಂದು ಕಾದುನೋಡಬೇಕಿದೆ.

ಈ ನಡುವೆ, ಗಾಜಾದಲ್ಲಿರುವ ಹಮಾಸ್ ಉಗ್ರ ನೆಲೆಗಳ ಮೇಲೆ ಇಸ್ರೇಲ್ ವಾಯು ದಾಳಿಯನ್ನು ತೀವ್ರಗೊಳಿಸಿದೆ. ಈ ಭಾಗದಲ್ಲಿರುವ ಉಗ್ರ ನೆಲೆಗಳನ್ನು ಗುರುತಿಸಿ ವಾಯುದಾಳಿ ನಡೆಸಲಾಗುತ್ತಿದ್ದು ಗಾಜಾ ಭಾಗದಲ್ಲಿ ಹಲವು ಮನೆಗಳು ಮತ್ತು ಅಪಾರ್ಟ್ಮೆಂಟ್ ಗಳು ನೆಲಸಮವಾಗಿದೆ.  ವಿಶ್ವಸಂಸ್ಥೆಯ  ಮಾನವೀಯ ಪರಿಹಾರ ಏಜೆನ್ಸಿಗಳ ಪ್ರಕಾರ ಗಾಜಾ ಭಾಗದಿಂದ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಪ್ಯಾಲೆಸ್ತೇನಿಯನ್ನರು ತಮ್ಮ ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ.

ಇಸ್ರೇಲ್ ನ ಹಿರಿಯ ಅಧಿಕಾರಿಗಳೂ ಸೇರದಂತೆ ಸುಮಾರು 100 ಜನರನ್ನು ಗಾಜಾದಲ್ಲಿ ನಮ್ಮ ಪಡೆಗಳು ಒತ್ತೆಯಾಳುಗಳನ್ನಾಗಿರಿಸಿಕೊಂಡಿವೆ ಎಂದು ಹಮಾಸ್ ಹೇಳಿಕೊಂಡಿದೆ.  ಅರಬ್ ಸುದ್ದಿ ಸಂಸ್ಥೆಗೆ ಈ ಕುರಿತಾಗಿ ಮೂಸಾ ಅಬು ಮರ್ಝೋಕ್ ಎಂಬಾತ ನೀಡಿರುವ ಹೇಳಿಕೆಯಲ್ಲಿ ಈ ಮಾಹಿತಿ ನೀಡಿದ್ದು, ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ನಾವು ಗಾಜಾದಲ್ಲಿ ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದೇವೆ ಎಂದು ಆತ ಮಾಹಿತಿ ನೀಡಿದ್ದಾನೆ.

Exit mobile version