ಮಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೆ ಪಾಕಿಸ್ತಾನದ ಐಎಸ್ಐ ಲಿಂಕ್ ಇರುವ ಬಗ್ಗೆ ಶಂಕೆ ಎದುರಾಗಿದೆ. ಕುಕ್ಕರ್ ನಲ್ಲಿ ಬಾಂಬ್ ಇರಿಸಿದ್ದ ಉಗ್ರ ಶಾರೀಕ್ ಗೆ ಐಎಸ್ಐ ಏಜೆಂಟ್ ಗಳ ಜೊತೆ ನಂಟಿರುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಉಗ್ರ ಶಾರೀಕ್ ಹೊಂದಿದ್ದ ಸಿಮ್ ಕಾರ್ಡ್ ಅನ್ನು ಒರಿಸ್ಸಾ ಮೂಲದ ಪ್ರೀತಂಕಾರ್(31) ಪೂರೈಕೆ ಮಾಡಿದ್ದು, ಈ ಹಿನ್ನಲೆಯಲ್ಲಿ ಒರಿಸ್ಸಾ ಸ್ಟೆಷಲ್ ಟಾಸ್ಕ್ ಫೋರ್ಸ್ ಪ್ರೀತಂ ಕಾರ್ ನನ್ನು ಬಂಧಿಸಿತ್ತು. ವಿಚಾರಣೆ ವೇಳೆ ಪಾಕಿಸ್ತಾನದ ಐಎಸ್ಐ ಏಜೆಂಟ್ ಒಬ್ಬನಿಗೆ ಪ್ರೀತಂ ಕಾರ್ ಸಿಮ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪೂರೈಸಿದ್ದ ಎಂಬ ಅಂಶ ಬಯಲಾಗಿದೆ.
ಬಳಿಕ ಅದೇ ಸಿಮ್ ಕಾರ್ಡ್ ಅನ್ನು ಉಗ್ರ ಶಾರೀಕ್ ಐಎಸ್ಐ ಏಜೆಂಟ್ ನೀಡಿರುವುದು ತನಿಖೆ ವೇಳೆ ಬಯಲಾಗಿದೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ ಒರಿಸ್ಸಾ ಎಸ್ಟಿಎಫ್ ಟೀಂ ಮಾಹಿತಿ ನೀಡಿದೆ. ದೇಶವಿರೋಧಿ ಕೃತ್ಯ, ಸೈಬರ್ ವಂಚನೆಗಳಿಗೆ ಪ್ರೀತಂ ಒಟಿಪಿ ಮಾರಾಟ ಮಾಡುತ್ತಿದ್ದ ಎಂಬ ಅಂಶವೂ ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲದೆ ಬ್ಯಾಂಕ್ ಅಕೌಂಟ್ ಹ್ಯಾಕ್, ನಕಲಿ ಸಿಮ್ ಕಾರ್ಡ್ ಮಾರಾಟ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವುದು ತಿಳಿದುಬಂದಿದೆ. ಸದ್ಯ ಪ್ರೀತಂ ವಶಕ್ಕೆ ಪಡೆದು ಎನ್ಐಎ ಅಧಿಕಾರಿಗಳ ತನಿಖೆ ನಡೆಸುತ್ತಿದ್ದಾರೆ.