ಪುತ್ತೂರು: ‘ಹಣ ಎಂದರೆ ಹೆಣ ಕೂಡ ಬಾಯಿ ಬಿಡುತ್ತದೆ..’ ಎಂಬ ಗಾದೆಯಂತೆ ಬಹುತೇಕ ಜನರು ಹಣದ ವಿಚಾರದಲ್ಲೇ ಮೋಸ ಹೋಗುತ್ತಾರೆ.
ಬಿಟ್ ಕ್ವಾಂಟ್ (Bitquant) ಎಂಬ ಮನಿ ಆ್ಯಪ್ (Money App) ನಲ್ಲಿ ಹಣ ಹೂಡಿಕೆ ಮಾಡಿದ ಹಲವರು ಮೋಸ ಹೋಗಿದ್ದಾರೆ. ಪುತ್ತೂರು ತಾಲೂಕಿನ ಹಲವು ಮಂದಿ ಈ ಆ್ಯಪ್ ನಲ್ಲಿ ಹಣ ಹೂಡಿ ಮೋಸ ಹೋಗಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ.
‘ಬಿಟ್ ಕ್ವಾಂಟ್’… ಇದೊಂದು ವಿದೇಶಿ ಹಣ ಹೂಡಿಕೆಯ ಆ್ಯಪ್ ಆಗಿದೆ. 2018ರಲ್ಲಿ ಆರಂಭಗೊಂಡ ಇದು ಲಂಡನ್ (London) ಮೂಲದ ‘ಯುನೈಟೆಡ್ ಕಿಂಗ್ಡಂ’ ಕಂಪೆನಿ ಎಂದು ಹೇಳಲಾಗುತ್ತಿದೆ.
ಇದೊಂದು ಕ್ರಿಪ್ಟೋ ಕರೆನ್ಸಿಗಳಿಗೆ (Crypto Currency) ವಿನಿಮಯ ವೇದಿಕೆಯಾಗಿದೆ. ಮೊದಲಿಗೆ ‘ಬಿಟ್ ಕ್ವಾಂಟ್’ ಎಂಬ ಆ್ಯಪನ್ನು ನಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಆ್ಯಪ್ ಡೌನ್‌ಲೋಡ್ ಮಾಡಿದ ಬಳಿಕ ಅದರಲ್ಲಿರುವ ಅಪ್ಲಿಕೇಶನ್ ಭರ್ತಿ ಮಾಡಿ, ನಂತರ ಹಣ ಹೂಡಿಕೆ ಮಾಡಬೇಕಾಗಿದ್ದು, ಇದರಲ್ಲಿ 6 ಸಾವಿರದಿಂದ 5 ಲಕ್ಷದ ತನಕ ಹಣ ಹೂಡಿಕೆ ಮಾಡಬಹುದಾಗಿದೆ.
ಹೀಗೆ ಹಣ ಹೂಡಿಕೆ ಮಾಡಿದ ಗ್ರಾಹಕರಿಗೆ ಆ್ಯಪ್‌ನಲ್ಲಿ 10 ಕಂಪೆನಿಗಳನ್ನು ತೋರಿಸಲಾಗುತ್ತದೆ.
ಪ್ರತೀದಿನ ಸಂಜೆ ಈ ಕಂಪೆನಿಗಳಲ್ಲಿ ಟ್ರೆಡಿಂಗ್ ಮಾಡುವ ವ್ಯವಸ್ಥೆ ಇರುತ್ತದೆ. ಕೆಲವು ದಿನ ಎರಡು ಟ್ರೇಡಿಂಗ್ ಇದ್ದರೆ, ಇನ್ನುಳಿದ ದಿನ ಒಂದೇ ಟ್ರೇಡಿಂಗ್ ಇರುತ್ತದೆ. ಟ್ರೇಡಿಂಗ್ ಬಗ್ಗೆ ವಾಟ್ಸ್ಯಾಪ್ ಗ್ರೂಪ್‌ಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗುತ್ತದೆ. ಇದಲ್ಲದೆ ನಾವು ಯಾವ ಕಂಪೆನಿಗೆ ಟ್ರೇಡಿಂಗ್ ಮಾಡಬೇಕು ಎನ್ನುವ ಬಗ್ಗೆಯೂ ನಮಗೆ ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಮಾಹಿತಿ ಬರುತ್ತದೆ.
ನಾವು 6 ಸಾವಿರ ಹಣ ಹೂಡಿಕೆ ಮಾಡಿದ ದಿನದಿಂದಲೇ ಟ್ರೇಡಿಂಗ್ ಆರಂಭವಾಗುತ್ತದೆ. ಹೊಸದಾಗಿ ಸೇರಿದ ಗ್ರಾಹಕರ ಟ್ರೇಡಿಂಗ್ ಸಿಗ್ನಲ್ ದರ ಶೇ.6, ಅತ್ಯಧಿಕ ವಹಿವಾಟು ಸಿಗ್ನಲ್ ದರ ಶೇ.10 ಆಗಿರುತ್ತದೆ.
ನಾವು ಒಬ್ಬ ವ್ಯಕ್ತಿಯನ್ನು 6 ಸಾವಿರ ಹಣ ಹೂಡಿಕೆ ಮಾಡಿ ಆಹ್ವಾನಿಸಿದಾಗ ನಮ್ಮ ಟ್ರೇಡಿಂಗ್ ಸಿಗ್ನಲ್ ದರ ಶೇ.7 ಆಗುತ್ತದೆ. 2 ಜನರನ್ನು ಸೇರಿಸಿದರೆ ಶೇ.8 ಹಾಗೇ ಹೆಚ್ಚುತ್ತಾ ಹೋಗುತ್ತದೆ. ನಾವು 8 ಜನರನ್ನು ಸೇರಿಸಿದಾಗ ನಮ್ಮ ಟ್ರೇಡಿಂಗ್ ಸಿಗ್ನಲ್ ದರ ಶೇ.10 ಆಗುತ್ತದೆ.
ಇಂತಹ ಕಂಪೆನಿಗಳು ಜನರನ್ನು ನಂಬಿಸುವ ರೀತಿಯಲ್ಲೇ ಹಣ ಹೂಡಿಕೆ ಮಾಡಿ ಟ್ರೇಡಿಂಗ್ ಮಾಡುತ್ತಾ ಹೋದಂತೆ ತನ್ನ ಚಾಣಾಕ್ಷತನವನ್ನು ತೋರಿಸುತ್ತಾ. ಹೆಚ್ಚೆಚ್ಚು ಹಣ ಪಡೆಯುತ್ತಾ ಜನರಿಗೆ ಮೋಸ ಮಾಡುತ್ತಾ ಹೋಗುತ್ತದೆ ಎಂಬುದು ಇದರಲ್ಲಿ ಹಣ ಹೂಡಿ ಕಳೆದುಕೊಂಡವರ ಅನುಭವ..
ಸ್ಮಾರ್ಟ್ ಯುಗದಲ್ಲಿ ನಾವು ಬಹಳಷ್ಟು ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕಾದ ಅನಿವಾರ್ಯತೆ ಇದೆ. ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ ಅದರಲ್ಲೂ ಹಣದ ವಿಚಾರದಲ್ಲಿ ನಾವು ಬಹಳ ಜಾಗರೂಕತೆಯಿಂದ ವ್ಯವಹರಿಸಬೇಕಾಗಿದೆ.