ಉಳ್ಳಾಲ: ಇಲ್ಲಿನ ಸೋಮೇಶ್ವರ ಬೀಚ್ ನಲ್ಲಿ ಸಮುದ್ರ ವಿಹಾರಕ್ಕೆಂದು ಬಂದಿದ್ದ ಗುಂಪಿನಲ್ಲಿದ್ದ ವೈದ್ಯರೊಬ್ಬರು ಸಮುದ್ರಪಾಲಾದ ದುರ್ಘಟನೆ ನಿನ್ನೆ (ಸೆ.03) ರವಿವಾರ ತಡರಾತ್ರಿ ನಡೆದಿದೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದ ಐವರು ವೈದ್ಯರ ತಂಡವೊಂದು ತಡರಾತ್ರಿ ಸೋಮೇಶ್ವರ ಕಡಲ ಕಿನಾರೆಗೆ ವಿಹಾರಕ್ಕೆಂದು ಬಂದಿದ್ದಾರೆ.
ಈ ಸಂದರ್ಭದಲ್ಲಿ ಇಲ್ಲಿನ ಅಪಾಯಕಾರಿ ಸ್ಥಳವೆಂದೇ ಗುರುತಿಸಲಾಗಿರುವ ರುದ್ರಪಾದೆಯ ಮೇಲೆ ಇವರೆಲ್ಲಾ ಏರಿದ್ದಾರೆ. ಈ ವೇಳೆ ಡಾ. ಪ್ರದೀಪ್ ಎಂಬವರು ಬಂಡೆಯ ಮೇಲಿಂದ ಜಾರಿ ಬಿದ್ದಿದ್ದಾರೆ.
ಜಾರಿ ಬಿದ್ದವರೇ ಅಲ್ಲಿದ್ದ ಬಂಡೆಯ ತುದಿಯನ್ನು ಹಿಡಿದು ಸಹಾಯಕ್ಕಾಗಿ ಯಾಚಿಸುತ್ತಿದ್ದ ಸಂದರ್ಭದಲ್ಲಿ ಪ್ರದೀಪ್ ರಕ್ಷಣೆಗೆ ಧಾವಿಸಿದ ಡಾ. ಅಶೀಕ್ ಗೌಡ, ಈ ಪ್ರಯತ್ನದಲ್ಲಿ ಕಾಲುಜಾರಿ ಸಮುದ್ರಕ್ಕೆ ಬಿದಿದ್ದಾರೆ.
ಬಳಿಕ, ಕಲ್ಲುಗಳ ಆಸರೆ ಪಡೆದು ಡಾ. ಪ್ರದೀಪ್ ಮೇಲೆ ಬಂದು ತಕ್ಷಣವೇ ದುರ್ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಡಾ. ಆಶೀಕ್ ಗೌಡ ಅವರ ಮೃತದೇಹ ಇಂದು (ಸೆ.04) ರುದ್ರಪಾದೆಯ ಸಮೀಪದಲ್ಲೇ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.