Site icon newsroomkannada.com

ದೈವ-ದೇವರ್ನಕ್ಲೆ ನಮ್ಮ ಊರುದಕ್ಲೆನ್ ಕಾಪುಲೆ!: ಇಸ್ರೇಲ್ ನಲ್ಲಿದ್ದಾರೆ 12 ಸಾವಿರಕ್ಕೂ ಹೆಚ್ಚು ಕರಾವಳಿಗರು

ಮಂಗಳೂರು: ಇಸ್ರೇಲ್‌ನಲ್ಲಿ ಹಮಾಸ್‌ ಉಗ್ರರ ಅಟ್ಟಹಾಸ ಮುಂದುವರಿದಿದೆ. ಈ ನಡುವೆ ಅಲ್ಲಿ ನೆಲೆಸಿರುವ ಕರಾವಳಿಯ ಜನರ ಸುರಕ್ಷತೆಯ ಪ್ರಶ್ನೆ ಎದುರಾಗಿದೆ. ಇಸ್ರೇಲ್‌ ನಲ್ಲಿರುವ ಕರಾವಳಿಗರ ಕುರಿತ ಸಣ್ಣ ವಿವರ ಇಲ್ಲಿದೆ.

12000 ಕ್ಕೂ ಹೆಚ್ಚು ಕರಾವಳಿಗರು ಇಸ್ರೇಲ್‌ ನಲ್ಲಿದ್ದಾರೆ. ಹೆಚ್ಚಿನವರು ನರ್ಸ್‌ಗಳಾಗಿ, ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅತಿಹೆಚ್ಚಿನ ಸಂಖ್ಯೆಯ ಕರಾವಳಿಗರು ಜೆರುಸಲೇಮ್ ಸುತ್ತಮುತ್ತ ನೆಲೆ ಕಂಡುಕೊಂಡಿದ್ದಾರೆ.

ಹೆಚ್ಚಿನ ಸಂಖ್ಯೆಯ ಮಹಿಳೆಯರು ಆರೋಗ್ಯ ಕ್ಷೇತ್ರದಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಕ್ರಿಶ್ಚಿಯನ್‌ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ಅಂದಾಜಿನ ಪ್ರಕಾರ ದಕ್ಷಿಣ ಕನ್ನಡದ 8000 ಕ್ಕೂ ಹೆಚ್ಚು ಮಂದಿ ಇಸ್ರೇಲ್‌ನಲ್ಲಿ ನೆಲೆಕಂಡುಕೊಂಡಿದ್ದಾರೆ. ಹೆಚ್ಚಿನ ಕರಾವಳಿ ಕನ್ನಡಿಗರು ಜೆರುಸಲೇಮ್, ಟೆಲ್ ಅವಿವ್, ಏಂಜೆಲಿಕಮ್ ಮತ್ತು ಹೈಫಾದಲ್ಲಿ ಕೆಲಸ ಮಾಡುತ್ತಾರೆ. ಈ ಪ್ರದೇಶಗಳಲ್ಲಿ ಯಾವುದೇ ದಾಳಿ ನಡೆದಿಲ್ಲವಾದರೂ, ಮುಂದೆ ಹಮಾಸ್ ಈ ಪ್ರದೇಶಗಳ ಮೇಲೆ ದಾಳಿ ಮಾಡುವ ಸಾಧ್ಯತೆಗಳಿವೆ.

ಅಲ್ಲಿನ ಸದ್ಯದ ಪರಿಸ್ಥಿತಿ ಕುರಿತು ಮಂಗಳೂರು ಮೂಲದ ಲಿಯೊನಾರ್ಡ್ ಫೆರ್ನಾಂಡಿಸ್ ವಿವರ ನೀಡಿದ್ದು, ನಾನು 14 ವರ್ಷಗಳಿಂದ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಇಸ್ರೇಲ್‌ನಲ್ಲಿ ರಾಕೆಟ್ ದಾಳಿ ಸಾಮಾನ್ಯ. ಆದರೆ ಈ ರೀತಿಯ ಯುದ್ಧವನ್ನು ಕಂಡಿದ್ದು, ಇದೇ ಮೊದಲು. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೈರನ್ ಮೊಳಗುತ್ತದೆ. ನಾವು ತಕ್ಷಣ ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆಯುತ್ತೇವೆ ಎಂದು ವಿವರಿಸಿದ್ದಾರೆ.

ಆರು ತಿಂಗಳ ಹಿಂದೆ ಇಸ್ರೇಲ್‌ ನಿಂದ ಮಂಗಳೂರಿಗೆ ಮರಳಿದ ರಾಮ್ ಕುಮಾರ್ ಅಮೀನ್ ಹೀಗೆ ಹೇಳುತ್ತಾರೆ, “ಇಸ್ರೇಲ್‌ನ ಪ್ರತಿಯೊಂದು ಮನೆಗೂ ಸಣ್ಣ ಪ್ರತ್ಯೇಕ ಶೆಲ್ಟರ್‌ ರೂಂಗಳನ್ನು ನಿರ್ಮಿಸಿರುತ್ತಾರೆ. ಇದು ಅಪಾಯದ ಸಂದರ್ಭದಲ್ಲಿ ಜೀವರಕ್ಷಣೆಗೆ ಸಹಾಯ ಮಾಡುತ್ತದೆ. ಅಪಾಯದ ಸೈರನ್‌ ಮೊಳಗಿದಾಕ್ಷಣ ನಾವು ಆ ಕೊಠಡಿ ಪ್ರವೇಶಿಸುತ್ತೇವೆ. ಸುರಕ್ಷತೆ ಖಾತರಿ ಸೈರನ್‌ ಮರುಮೊಳಗಿದ ಬಳಿಕವಷ್ಟೆ ನಾವು ಕೋಣೆಯಿಂದ ಹೊರಬರುತ್ತೇವೆ ಎಂದು ತಿಳಿಸಿದ್ದಾರೆ.

ಸದ್ಯ ಇಸ್ರೇಲ್ನಲ್ಲಿರುವ ಲಿಯೊನಾರ್ಡ್ ಫೆರ್ನಾಂಡಿಸ್‌ ಕೂಡ ವಿವರ ನೀಡಿದ್ದು, ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಾನು ಅಕ್ಟೋಬರ್ 10 ರಂದು ಮಂಗಳೂರಿಗೆ ಬರಬೇಕಿತ್ತು. ಆದರೆ, ಈಗ ಯುದ್ಧದ ಕಾರಣ ವಿಮಾನಗಳು ರದ್ದಾಗಿವೆ. ಕರಾವಳಿಯ ಜನರು ನನ್ನ ಸಂಪರ್ಕದಲ್ಲಿದ್ದು ಇಲ್ಲಿಯವರೆಗೆ ಯಾರಿಗೂ ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ.

ಕುಂದಾಪುರದವರು ಸುರಕ್ಷಿತ: ಇಸ್ರೇಲ್‌ನ ಫಲ್ ಅನೀಸ್ ನಗರ ಹಾಗೂ ಸುಮಾರು 12 ಕೀಮಿ ದೂರದಲ್ಲಿರುವ ಅರ್ಜಲಿಯಾ ಹಾಗೂ ಹವಾ ಭಾಗದಲ್ಲಿ ಹೆಚ್ಚಾಗಿ ಕುಂದಾಪುರ ಬೈಂದೂರು ತಾಲೂಕಿನವರು ವಾಸವಿದ್ದು, ಜೆರುಸಲೇಮ್ ಪ್ರದೇಶದಲ್ಲಿಯೂ ಕೆಲವರು ಇರುವ ಮಾಹಿತಿ ಇದೆ. ಕರಾವಳಿ ಜಿಲ್ಲೆಯವರು ಇರುವ ಕೆಲವು ಪ್ರದೇಶ ಕಡಿಮೆ ಯುದ್ಧಪೀಡಿತವಾಗಿದ್ದು, ಬಂಕರ್, ಸೇಫ್ ಹೌಸ್’ಗಳಲ್ಲಿ ರಕ್ಷಣೆ ಪಡೆದಿದ್ದಾರೆ.

ಕುಂದಾಪುರ ಮೂಲದವರು ಬೈಂದೂರು ಶಾಸಕ ಗುರುರಾಜ್‌ ಗಂಟೆಯೊಳ ಜತೆ ಸಂಪರ್ಕದಲ್ಲಿದ್ದು, ಕರಾವಳಿಗರು ಸುರಕ್ಷಿತರಾಗಿರುವ ವಿಷಯ ಖಚಿತ ಪಡಿಸಿದ್ದಾರೆ. ಶಾಸಕರೂ ಇಸ್ರೇಲ್‌ನಲ್ಲಿ ಸಿಲುಕಿರುವ ಕರಾವಳಿಗರೊಂದಿಗೆ ಸಂರ್ಕದಲ್ಲಿದ್ದಾರೆ. ಸಚಿವ ಶೋಭಾ ಕರಂದ್ಲಾಜೆ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಇಸ್ರೇಲ್ ದೇಶದಲ್ಲಿರುವ ಕರಾವಳಿಗರ ಕುರಿತಂತೆ ಮಾಹಿತಿ ನೀಡಿದ್ದು, ಅವರಿಬ್ಬರೂ ರಾಯಭಾರ ಕಚೇರಿಯವರ ಸಂಪರ್ಕದಲ್ಲಿ ಇದ್ದಾರೆ ಎಂದು ಶಾಸಕ ಗುರುರಾಜ್‌ ತಿಳಿಸಿದ್ದಾರೆ.

ಇಸ್ರೇಲಿನ ಅರ್ಜಲಿಯಾ ನಗರದಲ್ಲಿ ಹೌಸ್ ನರ್ಸ್ ಆಗಿರುವ ಉಪ್ಪುಂದ ಮೂಲಕ ಕಾರನ್ ಉಪ್ಪುಂದ ಅವರು ಇಸ್ರೇಲಿನ ಸದ್ಯದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಸದ್ಯ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ, ಸೋಮವಾರ ಸೈರನ್ ಶಬ್ದ ಮಾಡಿದ್ದು ಬಿಟ್ಟರೆ ಸಾರ್ವಜನಿಕರಿಗೆ ಯಾವುದೇ ಸಂದೇಶ ರವಾನಿಸಿಲ್ಲ.

ಹಾಗೇನಾದರೂ ಅಪಾಯದ ಸಂಧರ್ಭ ಬಂದರೆ ಈಗಿರುವ ಜಾಗ ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದು ಇಸ್ರೇಲ್ ಸರ್ಕಾರ ಸೂಚನೆ ಕೊಡುತ್ತದೆ, ಅಲ್ಲದೇ ಸೈರನ್ ಆನ್ ಆಗುವುದರಿಂದ ತಕ್ಷಣ ನಾವೆಲ್ಲರೂ ಸೇಫ್ ಹೌಸ್, ಬಂಕಲ್, ಸೇಪ್ ರೂಂ ಸೇರಿಕೊಳ್ಳಲು ಅವಕಾಶವಿದೆ. ಸದ್ಯಕ್ಕೆ ಅಂಥ ಯಾವುದೇ ಮುನ್ಸೂಚನೆ ಸರ್ಕಾರ ಕೊಟ್ಟಿಲ್ಲ. ನಾವೆಲ್ಲ ವಾಸಿಸುವ ಪ್ರದೇಶ ಬಾರ್ಡರಿನಿಂದ ದೂರವಿದೆ ಎಂದಿದ್ದಾರೆ.

Exit mobile version