main logo

ಫೈನಲ್ ಕಕ್ಷೆ ತಗ್ಗಿಸುವಿಕೆ ಯಶಸ್ವಿ – ISRO ನೌಕೆ ಚಂದಿರನಿಗೆ ಇನ್ನಷ್ಟು ಹತ್ತಿರ

ಫೈನಲ್ ಕಕ್ಷೆ ತಗ್ಗಿಸುವಿಕೆ ಯಶಸ್ವಿ – ISRO ನೌಕೆ ಚಂದಿರನಿಗೆ ಇನ್ನಷ್ಟು ಹತ್ತಿರ

ಬೆಂಗಳೂರು: ಚಂದ್ರಯಾನ-3ರ ಮಹತ್ವದ ಘಟ್ಟಕ್ಕೆ ಕ್ಷಣಗಣನೆ ಪ್ರಾರಂಭಗೊಂಡಿದೆ. ಚಂದ್ರಯಾನ ನೌಕೆಯ ಅಂತಿಮ ಹಂತದ ಕಕ್ಷೆ ತಗ್ಗಿಸುವಿಕೆ ಪ್ರಕ್ರಿಯೆ ಇಂದು (ಆ.16) ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದೀಗ ನೌಕೆ ಚಂದ್ರನ ಕಕ್ಷೆಯಲ್ಲಿ 150 ಕಿ.ಮೀ X177 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇದರೊಂದಿಗೆ ನೌಕೆಯ ಕಕ್ಷೆ ತಗ್ಗಿಸುವಿಕೆಯ ಎಲ್ಲಾ ಹಂತಗಳೂ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇನ್ನು ಪ್ರೊಪಲ್ಷನ್ ಮಾಡ್ಯೂಲ್ ನಿಂದ ಲ್ಯಾಂಡರ್ ಮಾಡ್ಯೂಲ್ ಬೇರ್ಪಡಬೇಕಾದ ಮಹತ್ವದ ಹಂತ ನಡೆಯಬೆಕಾಗಿದೆ. ಈ ಮಹತ್ವದ ಘಟ್ಟಕ್ಕೆ ನಾಳೆ (ಆ.17) ಮುಹೂರ್ತ ಫಿಕ್ಸ್ ಆಗಿದೆ.

ಇಸ್ರೋ ಪ್ರಕಾರ ಚಂದ್ರಯಾನ-3ರ ಎಲ್ಲಾ ಪ್ರಕ್ರಿಯೆಗಳೂ ಯೋಜನೆಯಂತೇ ನಡೆಯುತ್ತಿದ್ದು ನೌಕೆ ಉಡ್ಡಯನಗೊಂಡ ದಿನದಿಂದ ಇಲ್ಲಿಯವರೆಗೆ ಎಲ್ಲಾ ಪ್ರಕ್ರಿಯೆಗಳನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ಈವರೆಗೆ ಇಸ್ರೋ ಮೂರು ಕಕ್ಷೆ ತಗ್ಗಿಸುವಿಕೆ ಪ್ರಕ್ರಿಯೆಗಳನ್ನು ಆ.06, 09 ಮತ್ತು 14ರಂದು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಆ.5ರಂದು ಚಂದ್ರಯಾನ ನೌಕೆ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು.

ಇನ್ನು ಮಾಡ್ಯುಲರ್ ಬೇರ್ಪಡೆ ವಿಧಾನವೂ ಯಶಸ್ವಿಯಾಗಿ ನಡೆದಲ್ಲಿ, ವಿಕ್ರಂ ಲ್ಯಾಂಡರ್ ನಿಗದಿತ ದಿನದಂದೇ ಅಂದರೆ ಆ.23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ ಎಂಬ ವಿಶ್ವಾಸವನ್ನು ಇಸ್ರೋ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದೆ.

ಚಂದಿರನ ದಕ್ಷಿಣ ಧ್ರುವ ಭಾಗದಲ್ಲಿ ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಬಳಿಕ ಅದರಿಂದ ಹೊರಬರುವ ಪ್ರಗ್ಯಾನ್ ರೋವರ್ ತನ್ನ ಸುತ್ತಲಿನ ಪ್ರದೇಶದ ಮಾಹಿತಿ ಮತ್ತು ಫೊಟೋಗಳನ್ನು ಸಂಗ್ರಹಿಸಿ ಭೂಮಿಗೆ ಕಳುಹಿಸಿಕೊಡಲಿದೆ.

Related Articles

Leave a Reply

Your email address will not be published. Required fields are marked *

error: Content is protected !!