main logo

ಏಕದಿನ ವಿಶ್ವಕಪ್, ಪಾಕ್‌ ವಿರುದ್ಧ ಭಾರತಕ್ಕೆ ಅಮೋಘ ಗೆಲುವು: ​ ಎಂಟರಲ್ಲೂ ‘ಪಾಕ್’ ವಿರುದ್ಧ ಗೆಲುವಿನ ನಂಟು!:

ಏಕದಿನ ವಿಶ್ವಕಪ್, ಪಾಕ್‌ ವಿರುದ್ಧ ಭಾರತಕ್ಕೆ ಅಮೋಘ ಗೆಲುವು: ​ ಎಂಟರಲ್ಲೂ ‘ಪಾಕ್’ ವಿರುದ್ಧ ಗೆಲುವಿನ ನಂಟು!:

ಅಹ್ಮದಾಬಾದ್: ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಅಮೋಘ ಗೆಲುವು ಕಂಡಿದೆ. ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಮಿಂಚಿದ ಟೀಮ್ ಇಂಡಿಯಾ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿ 86 ರನ್ ಚಚ್ಚಿ ಪಾಕ್ ಬೌಲರ್​ಗಳ ಬೆವರಿಳಿಸಿದರು. ಈ ಗೆಲುವಿನ ಮೂಲಕ ಭಾರತ ತಂಡ ವಿಶ್ವಕಪ್ ಪಾಯಿಂಟ್ ಟೇಬಲ್​ನಲ್ಲಿ ಆರು ಅಂಕ ಸಂಪಾದಿಸಿ ಅಗ್ರಸ್ಥಾನಕ್ಕೇರಿದೆ. ಅಲ್ಲದೆ ಪಾಕ್ ವಿರುದ್ಧ ವಿಶ್ವಕಪ್​ನಲ್ಲಿ ತನ್ನ ಗೆಲುವಿನ ದಾಖಲೆ ಮುಂದುವರೆಸಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಪಾಕಿಸ್ತಾನ ತಂಡ ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 191 ರನ್​ಗೆ ಆಲೌಟ್ ಆಯಿತು. ಬಳಿಕ ಟಾರ್ಗೆಟ್ ಬೆನ್ನಟ್ಟಲು ಬಂದ ಭಾರತ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆಗೆ 2 ಪ್ರಮುಖ ವಿಕೆಟ್ ಕಳೆದುಕೊಂಡಿತು. ಶುಭ್​ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ತಲಾ 16 ರನ್ ಗಳಿಸಿ ಔಟಾದರು. ಆದರೆ, ನಾಯಕ ರೋಹಿತ್ ಶರ್ಮಾ ಮನಬಂದಂತೆ ಬ್ಯಾಟ್ ಬೀಸಿದರು. ಕೇವಲ 36 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.

ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದ ಹಿಟ್​ಮ್ಯಾನ್ 63 ಎಸೆತಗಳಲ್ಲಿ 6 ಫೋರ್, 6 ಸಿಕ್ಸರ್ ಚಚ್ಚಿ 86 ರನ್ ಗಳಿಸಿದರು. ಈ ಮೂಲಕ ತಂಡ ಬೇಗನೆ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಶ್ರೇಯಸ್ ಅಯ್ಯರ್ 53 ಹಾಗೂ ಕೆಎಲ್ ರಾಹುಲ್ 19 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತ 30.3 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಜಯ ಕಂಡಿತು.

ಇದಕ್ಕೂ ಮುನ್ನ ಟಾಸ್ ಸೋತು ಪಾಕ್ ಪರ ಇನ್ನಿಂಗ್ಸ್ ಆರಂಭಿಸಿದ ಅಬ್ದುಲ್ ಶಫೀಖ್ ಹಾಗೂ ಇಮಾನ್ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 8 ಓವರ್ ಆಗುವ ಹೊತ್ತಿಗೆ 41 ರನ್ ಗಳಿಸಿದ್ದಾಗ ಸಿರಾಜ್ ಬೌಲಿಂಗ್​ನಲ್ಲಿ ಶಫೀಖ್ (20) ಎಲ್​ಬಿ ಬಲೆಗೆ ಸಿಲುಕಿದರು. ನಂತರ ಇಮಾಮ್ (36) ಹಾರ್ದಿಕ್ ಪಾಂಡ್ಯ ಬೌಲಿಂಗ್​ನಲ್ಲಿ ಕೀಪರ್ ರಾಹುಲ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ, ಈ ಸಂದರ್ಭ ಜೊತೆಯಾದ ಪಾಕ್ ಅನುಭವಿ ಬ್ಯಾಟರ್​ಗಳಾದ ನಾಯಕ ಬಾಬರ್ ಅಝಂ ಹಾಗೂ ಮೊಹಮ್ಮದ್ ರಿಝ್ವಾನ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು.

ಭಾರತೀಯ ಬೌಲರ್​ಗಳ ಮರ್ಮವನ್ನು ಅರಿತ ಬಾಬರ್-ರಿಝ್ವಾನ್ ಜೋಡಿ 82 ರನ್​ಗಳ ಕಾಣಿಕೆ ನೀಡಿದರು. ಫಾರ್ಮ್ ವೈಫಲ್ಯದಿಂದ ಬಳಲುತ್ತಿದ್ದ ಬಾಬರ್ ಅರ್ಧಶತಕ ಸಿಡಿಸಿದರು. ಆದರೆ, 50 ರನ್ ಗಳಿಸಿದ ಕೂಡಲೇ ಬಾಬರ್ ಅವರು ಸಿರಾಜ್ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ಇದರ ಬೆನ್ನಲ್ಲೆ ಕುಲ್ದೀಪ್, ಸೌದ್ ಶಕೀಲ್ (6) ಅವರನ್ನು ಎಲ್​ಬಿಡಬ್ಲ್ಯೂ ಮಾಡಿದರೆ, ಇಫ್ತಿಖರ್ ಅಹ್ಮದ್​ರನ್ನು (4) ಬೌಲ್ಡ್ ಮಾಡಿದರು. ಅತ್ತ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದ ರಿಝ್ವಾನ್ 49 ರನ್ ಗಳಿಸಿದ್ದಾಗ ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಶಬಾದ್ ಖಾನ್ ಕೂಡ 2 ರನ್​ಗೆ ಔಟಾದರು.

155 ರನ್​ಗೆ 3ನೇ ವಿಕೆಟ್ ಕಳೆದುಕೊಂಡ ಪಾಕಿಸ್ತಾನ 171 ರನ್ ಆಗುವ ಹೊತ್ತಿಗೆ 7 ವಿಕೆಟ್ ಪತನಗೊಂಡಿತು. ದಿಢೀರ್ ಕುಸಿತದಿಂದ ಬಾಬರ್ ಪಡೆ ಮೇಲೇಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 42.5 ಓವರ್​ಗಳಲ್ಲಿ 191 ರನ್​ಗಳಿಗೆ ಆಲೌಟ್ ಆಯಿತು. ಭಾರತ ಪರ ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ತಲಾ 2 ವಿಕೆಟ್ ಕಿತ್ತರು.

Related Articles

Leave a Reply

Your email address will not be published. Required fields are marked *

error: Content is protected !!