ಇಂದೋರ್: ಮುಂಬರುವ ವಿಶ್ವಕಪ್ ಗೆ ಭರ್ಜರಿ ಸಿದ್ಧತೆಯನ್ನು ಪ್ರಾರಂಭಿಸಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು ಎರಡನೇ ಏಕದಿನ ಪಂದ್ಯದಲ್ಲಿ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 99 ರನ್ ಗಳ ಅಧಿಕಾರಯುತ ಗೆಲವುನ್ನು ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಟೀಂ ಇಂಡಿಯಾ, ಓಪನರ್ ಶುಭಮನ್ ಗಿಲ್ (104) ಮತ್ತು ವನ್ ಡೌನ್ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ (105) ಅವರ ಭರ್ಜರಿ ಶತಕದಾಟ ಮತ್ತು ಕೊನೆಯಲ್ಲಿ ಸಿಡಿದ ಸೂರ್ಯಕುಮಾರ್ ಯಾದವ್ (37 ಎಸೆತಗಳಲ್ಲಿ ಅಜೇಯ 72) ಅವರ ಸ್ಪೋಟಕ ಬ್ಯಾಟಿಂಗ್ ಮತ್ತು ಅನುಭವಿ ಬ್ಯಾಟ್ಸ್ ಮನ್ ಕೆ ಎಲ್ ರಾಹುಲ್ (52) ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 399 ರನ್ ಬೆಟ್ಟವನ್ನೇ ಕಾಂಗಾರೂಗಳೆದುರು ಪೇರಿಸಿತು.
ಭಾರತದ ಈ ಬ್ಯಾಟಿಂಗ್ ಪ್ರತಿಭೆಗಳೆದುರು ಆಸೀಸ್ ಬೌಲರ್ ಗಳ ಆಟ ನಡೆಯಲೇ ಇಲ್ಲ. ಗಿಲ್ ಮತ್ತು ಅಯ್ಯರ್ 2ನೇ ವಿಕೆಟಿಗೆ ಭರ್ಜರಿ 200 ರನ್ ಗಳ ಜೊತೆಯಾಟವನ್ನು ನೀಡಿದ್ದು ಈ ಪಂದ್ಯದ ಹೈಲೈಟಾಗಿತ್ತು.
ಭಾರತದ ರನ್ ಬೆಟ್ಟವನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಇನ್ನಿಂಗ್ಸ್ ಉದ್ದಕ್ಕೂ ಆಗಾಗ ಮಳೆ ಕಾಟ ಮುಂದುವರೆದಿತ್ತು.
ಅನುಭವಿ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ (53), ಸೀನ್ ಅಬೋಟ್ (54) ಮಾತ್ರವೇ ಆಸೀಸ್ ಪಾಳಯದಲ್ಲಿ ಫಿಫ್ಟಿ ದಾಖಲಿಸಿದರು. ಉಳಿದಂತೆ ಆಸೀಸ್ ಪರ ಯಾರೊಬ್ಬ ಬ್ಯಾಟ್ಸ್ ಮನ್ ಗಳಿಂದಲೂ ಉತ್ತಮ ಪ್ರದರ್ಶನ ದಾಖಲಾಗಲಿಲ್ಲ.
ಟೀಂ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ತಲಾ 3 ವಿಕೆಟ್ ಗಳನ್ನು ಪಡೆದುಕೊಂಡರೆ, ಪ್ರಸಿದ್ಧ ಕೃಷ್ಣ 2 ಮತ್ತು ಮಹಮ್ಮದ್ ಶಮಿ 1 ವಿಕೆಟ್ ಪಡೆದರು.