Site icon newsroomkannada.com

ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಪ್ರಧಾನಿ ಮೋದಿ ಖಂಡನೆ

india-stands-with-manipur-peace-returning-to-state-says-pm-modi

ನವದೆಹಲಿ: ಐತಿಹಾಸಿಕ ಕೆಂಪು ಕೋಟೆಯ ಮೇಲಿಂದ ದೇಶವನ್ನುದ್ದೇಶಿಸಿ ಸತತ ಹತ್ತನೇ ಬಾರಿ ಸ್ವಾತಂತ್ರ್ಯೋತ್ಸವ ಭಾಷಣವನ್ನು ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರ ಹಿಂಸೆಯ ಬಗ್ಗೆ ಮಾತನಾಡಿದ್ದಾರೆ.

ತಮ್ಮ ಭಾಷಣದಲ್ಲಿ ಮಣಿಪುರದಲ್ಲಿನ ಹಿಂಸಾಚಾರ ಘಟನೆಗಳ ಬಗ್ಗೆ ಮಾತನಾಡಿದ ಪ್ರಧಾನಿಯವರು ಈಶಾನ್ಯ ಭಾರತದ ಈ ರಾಜ್ಯದಲ್ಲಿ ಶೀಘ್ರವೇ ಶಾಂತಿ ಸ್ಥಾಪನೆಯಾಗಲಿ ಇದಕ್ಕೆ ಮಣಿಪುರದ ನಾಗರಿಕರ ಸಹಕಾರ ಬೇಕಾಗಿದೆ ಎಂದು ಹೇಳಿದರು.

ಈ ರಾಜ್ಯದಲ್ಲಿ ಶಾಂತಿಯನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ಅಲ್ಲಿನ ರಾಜ್ಯ ಸರಕಾರ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಇಲ್ಲಿ ಮಹಿಳೆಯರ ಮೇಲೆ ನಿರಂತರ ಹಿಂಸೆ ಮತ್ತು ಅವಹೇಳನಗಳಂತಹ ಪ್ರಕರಣಗಳು ಮರುಕಳಿಸುತ್ತಿರುವುದನ್ನು ಇದೇ ಸಂದರ್ಭದಲ್ಲಿ ಖಂಡಿಸಿದ ಪ್ರಧಾನಿಯವರು, ‘ಕಳೆದ ಕೆಲ ಸಮಯಗಳಿಂದ ಮಣಿಪುರದಲ್ಲಿ ಹಿಂಸಾಚಾರದ ವಾತಾವರಣವಿದೆ. ಹಲವರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ ಹಾಗೂ ನಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಅಪಮಾನಿಸಲಾಗಿದೆ. ಆದರೆ, ಈ ಭಾಗದಲ್ಲಿ ಶಾಂತಿ ನಿಧಾನವಾಗಿ ಮರುಕಳಿಸುತ್ತಿದೆ. ಭಾರತ ಮಣಿಪುರದೊಂದಿಗಿದೆ..’ ಎಂದು ತಮ್ಮ ಭಾಷಣದಲ್ಲಿ ಹೇಳಿದರು.

ಇದೇ ವೇಳೆ, ಶಾಂತಿ ಮೂಲಕವೇ ಮಣಿಪುರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಒತ್ತುನೀಡಿ ಹೇಳಿದರು.

ಮೇ 03ರಿಂದ ಮಣಿಪುರದ ಎರಡು ಬುಡಕಟ್ಟು ಸಮುದಾಯಗಳ ನಡುವೆ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಇದುವರೆಗೂ 160 ಜನ ಸಾವಿಗೀಡಾಗಿದ್ದು ಹಲವರು ಗಾಯಗೊಂಡಿದ್ದಾರೆ.

Exit mobile version