ಬೆಂಗಳೂರು: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಥಾನ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಭಕ್ತರು ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರಮುಖವಾಗಿ ದೇಶದ ನಾನಾ ಭಾಗಗಳಿಂದ ರೈಲು ಹಾಗೂ ವಿಮಾನಗಳ ಮೂಲಕ ಆಗಮಿಸಲಿದ್ದಾರೆ.
ಕರ್ನಾಟಕದಿಂದ ನೀವೇನಾದರು ವಿಮಾನದ ಮೂಲಕ ಅಯೋಧ್ಯೆಗೆ ಭೇಟಿ ನೀಡುವ ಪ್ಲಾನ್ ಮಾಡಿಕೊಂಡಿದ್ದರೆ, ರಾಜ್ಯದಲ್ಲಿ ಎಲ್ಲಿಂದ ವಿಮಾನ ಸೇವೆ ಇದೆ, ಟಿಕೆಟ್ ದರ ಎಷ್ಟಿದೆ, ಎಷ್ಟು ದಿನಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕು ಎಂಬುದು ಸೇರಿದಂತೆ ಅಗತ್ಯ ಮಾಹಿತಿ ತಿಳಿದುಕೊಂಡರೆ ಮುಂದಾಗುವ ಗೊಂದಲಗಳನ್ನು ತಪ್ಪಿಸಿಬಹುದು. ಸದ್ಯದ ಮಟ್ಟಿಗೆ ಬೆಂಗಳೂರು ಹೊರತುಪಡಿಸಿದರೆ ಕರ್ನಾಟಕದ ಯಾವುದೇ ನಗರದಿಂದ ಅಯೋಧ್ಯೆಗೆ ವಿಮಾನ ಸೇವೆ ಇಲ್ಲ. ಇನ್ನ ಬೆಂಗಳೂರನಿಂದಲೂ ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ 1 ವಿಮಾನ ಮಾತ್ರ ನೇರ ಸೇವೆ ನೀಡುತ್ತಿದೆ. ಇತರೆ ವಿಮಾನಗಳಿಂದ ಒಂದು ಅಥವಾ ಎರಡು ಸ್ಟಾಪ್ ಇರುತ್ತದೆ.
ಬೆಂಗಳೂರಿಂದ ದೆಹಲಿಗೆ ಅಲ್ಲಿಂದ ಅಯೋಧ್ಯೆಗೆ, ಇಲ್ಲವೇ ಬೆಂಗಳೂರು-ಗ್ವಾಲಿಯರ್-ಅಯೋಧ್ಯೆ, ಬೆಂಗಳೂರು-ಮುಂಬೈ-ಅಯೋಧ್ಯೆ, ಬೆಂಗಳೂರು-ಅಹಮದಾಬಾದ್-ಅಯೋಧ್ಯೆಗೆ ಹೀಗೆ ಬೆಂಗಳೂರಿನಿಂದ ಹೋಗುವ ವಿಮಾನಗಳು ಮಧ್ಯದಲ್ಲಿ ಒಂದು ಕಡೆ ಇಳಿದು ನಂತರ ಅಯೋಧ್ಯೆಗೆ ತಲುಪುತ್ತವೆ. ಜನವರಿ 22ರ ಸೋಮವಾರ ರಾಮಮಂದಿರ ಪ್ರಾಣ ಪ್ರತಿಷ್ಠಾಪನ ಸಮಾರಂಭ ಇರುವುದರಿಂದ ವಾರಂತ್ಯದ ದಿನಗಳಾದ ಜನವರಿ 20ರ ಶನಿವಾರ ಮತ್ತು ಜನವರಿ 21ರ ಭಾನುವಾರ ಟಿಕೆಟ್ ದರಗಳಲ್ಲಿ ಶೇಕಡಾ 400 ರಷ್ಟು ಹೆಚ್ಚಳವಾಗಿದೆ. ಈ ಎರಡೂ ದಿನಗಳ ಟಿಕೆಟ್‌ಗಳು ಈಗಾಗಲೇ ಸೋಲ್ಡ್‌ಔಟ್ ಆಗಿವೆ. ಎಲ್ಲೋ ಒಂದೆರಡು ಸೀಟುಗಳು ಖಾಲಿ ಇರಬಹುದು.
ಜನವರಿ 20ರ ಶನಿವಾರ ಬೆಂಗಳೂರಿನಿಂದ ಆಯೋಧ್ಯೆಗೆ ಅತಿ ಕಡಿಮೆ ಟಿಕೆಟ್ ದರ 24,000 ರೂಪಾಯಿ ಇದೆ. ಇದೇ ದಿನದಿಂದು ಅತಿ ದುಬಾರಿ ಬೆಲೆಯ ಟಿಕೆಟ್ 29,700 ರೂಪಾಯಿ ಇದೆ. ಎರಡೂವರೆ ಗಂಟೆಯ ಪ್ರಯಾಣಕ್ಕೆ ಇಷ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಆದರೆ ಸಾಮಾನ್ಯ ದಿನಗಳಲ್ಲಿ 5,500 ರೂಪಾಯಿಯಿಂದ ಆರಂಭವಾಗುತ್ತದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಅಯೋಧ್ಯೆಗೆ ವಿಮಾನದ ಮೂಲಕ ತಲುಪಬಹುದು. ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಹೆಚ್ಚಿನ ಸೇವೆಗಳು ಲಭ್ಯ ಇವೆ. ಇದೇ ತಿಂಗಳ ಮೊದಲ ವಾರದಲ್ಲಿ ಪ್ರಧಾನಿ ಮೋದಿ ಅವರು ಅಯೋಧ್ಯೆಯಲ್ಲಿರುವ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯೆ ಧಾಮವನ್ನು ಲೋಕಾರ್ಪಣೆ ಮಾಡಿದ್ದರು.