ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹೇರಿ ಗಡೀಪಾರು ಮಾಡುವ ಕಾರ್ಯಕ್ಕೆ ಹಸಂತಡ್ಕ ಕಿಡಿ
ಪುತ್ತೂರು: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯ ಸರಕಾರ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಕಳೆದ 2-3 ತಿಂಗಳಿನಿಂದ ಹಿಂದು ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹೇರಿ ಗಡೀಪಾರು ಮಾಡುವ ಕಾರ್ಯಕ್ಕೆ ಕೈಹಾಕಿದೆ. ಇಂಥ ಕೆಲಸವನ್ನು ನಿಲ್ಲಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸರಕಾರ ಜವಾಬ್ದಾರಿಯಾಗಲಿದೆ ಎಂದು ಗೋರಕ್ಷಾ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಕಾರ್ಯಕರ್ತರ ಮೇಲಿನ ದಬ್ಬಾಳಿಕೆ ನಿಲ್ಲಿಸದಿದ್ದರೆ ಹಿಂದೂ ಸಮಾಜ ತಕ್ಕ ಉತ್ತರ ನೀಡುವ ಪರಿಸ್ಥಿತಿ ಬರಲಿದೆ. ಈ ರೀತಿ ಧರ್ಮ ರಕ್ಷಣೆ ಜತೆ ಗೋಹತ್ಯೆ, ಲವ್ ಜಿಹಾದಿ ಮಟ್ಟ ಹಾಕುವ ಕೆಲಸವನ್ನಷ್ಟೇ ನಮ್ಮ ಕಾರ್ಯಕರ್ತರು ಮಾಡುತ್ತಿದ್ದು, ಬೇರೆ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲ. ಹಾಗಂತ ಗಡಿಪಾರು ಆದೇಶ ಮಾಡುವುದಾದರೆ ಸಾವಿರ ಹಿಂದೂ ಕಾರ್ಯಕರ್ತರ ಪಟ್ಟಿ ನೀಡುತ್ತೇವೆ. ತಾಕತ್ತಿದ್ದರೆ ಎಲ್ಲರನ್ನೂ ಗಡಿಪಾರು ಮಾಡಲಿ ಎಂದು ಸವಾಲೆಸೆದರು.
ಈ ರೀತಿಯ ಪ್ರಕ್ರಿಯೆಗಳಿಂದ ಸರಕಾರ ಮತ್ತು ಪೊಲೀಸ್ ಇಲಾಖೆ ಹಿಂದೂ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ. ಇದು ಖಂಡನೀಯ. ಇದೀಗ ನಮ್ಮ ಸಂಘಟನೆಯ ಭರತ್ ಕುಮ್ಡೇಲು ಅವರಿಗೆ ಗಡಿಪಾರು ಆದೇಶ, ಜಯಪ್ರಕಾಶ್ ಹಾಗೂ ಜಯರಾಮ ಎಂಬವರ ಮೇಲೆ ಗೂಂಡಾ ಕಾಯ್ದೆ ಪ್ರಕರಣ ದಾಖಲು ಮಾಡಿದ್ದು ಸರಕಾರಿ ವ್ಯವಸ್ಥೆಯೇ ಗೂಂಡಾಗಿರಿ ಮಾಡುತ್ತಿದೆ. ಇದನ್ನು ಕಾನೂನಾತ್ಮಕವಾಗಿ ಹೋರಾಡುವ ಶಕ್ತಿ ನಮ್ಮ ಸಂಘಟನೆಗಿದೆ ಎಂದು ತಿಳಿಸಿದರು.