ಬೆಳಗಾವಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ದುಡಿದು ನಿಮ್ಮ ಮಕ್ಕಳು ಚೆನ್ನಾಗಿರಲಿ ಎಂದು ಮಾಡಿದ ಆಸ್ತಿಯನ್ನು ವಶಪಡಿಸಿಕೊಳ್ಳಲಿದೆ ಎಂದು ಪ್ರಧಾನಿ ಮೋದಿ ಗಂಭೀರ ಮಾಡಿದ್ದಾರೆ.
ರಾಹುಲ್ ಗಾಂಧಿ ಮತ್ತು ಸ್ಯಾಮ್ ಪಿತ್ರೋಡಾ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ಚುನಾವಣಾ ಪ್ರಚಾರಗಳಲ್ಲೂ ವಾಗ್ದಾಳಿ ನಡೆಸಿದ್ದ ಪ್ರಧಾನಿ ಕರ್ನಾಟಕದಲ್ಲೂ ಮುಂದುವರಿಸಿದರು. ನಿಮ್ಮಿಂದ ಆಗದಿದ್ರೆ ಮನೆಗೇ ನಡೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಮಾಲಿನಿ ಸಿಟಿ ಮೈದಾನದಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.
ಬೆಳಗಾವಿ ಮತ್ತು ಚಿಕ್ಕೋಡಿಯ ಸೋದರ ಸೋದರಿಯರಿಗೆ ನನ್ನ ನಮಸ್ಕಾರಗಳು, ತಾಯಿ ಭುವನೇಶ್ವರಿ, ಸವದತ್ತಿ ಎಲ್ಲಮ್ಮನಿಗೆ ನನ್ನ ಪ್ರಣಾಮಗಳು ಎಂದು ಕನ್ನಡದಲ್ಲೇ ಮಾತು ಆರಂಭಿಸಿ ಬಳಿಕ ಹಿಂದಿಯಲ್ಲಿ ಮುಂದುವರಿಸಿದರು. ಈ ವೇಳೆ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಅವರ ಉಲ್ಲೇಖವನ್ನು ಮಾಡಿ ಕನ್ನಡಿಗರು ಮತ್ತು ಮರಾಠಿ ಭಾಷಿಗರ ಮನಗೆಲ್ಲಲು ಪ್ರಯತ್ನಿಸಿದರು.
ನಾವೆಲ್ಲರೂ ಶಿವಾಜಿ ಮಹಾರಾಜರನ್ನು ಇಷ್ಟಪಡುತ್ತೇವೆ, ಬಸವಣ್ಣನನ್ನು ಅನುಸರಿಸುತ್ತೇವೆ. ಶಿವಾಜಿ ಮಹಾರಾಜರು ಬಲಿಷ್ಠ ಭಾರತವನ್ನು ಕಟ್ಟಲು ಬಯಸಿದ್ದರು. ಬಸವಣ್ಣ ವಿಶ್ವಕ್ಕೇ ಪ್ರಜಾಪ್ರಭುತ್ವದ ಮಾದರಿ ನೀಡಿದರು. ಕಳೆದ 10 ವರ್ಷದಿಂದ ಭಾರತ ಬಲಿಷ್ಠವಾಗಿದೆ. ಇದು ಗರ್ವಪಡುವ ವಿಷಯವಾಗಿದೆ.
ಭಾರತ ಬಲಿಷ್ಠವಾಗುವ ವೇಳೆ ಇಡೀ ದೇಶದ ಜನರು ಸಂಭ್ರಮಿಸುತ್ತಾರೆ. ಆದರೆ ಕಾಂಗ್ರೆಸಿಗರು ಮಾತ್ರ ಮರುಕಪಡುತ್ತಾರೆ. ಕೊರೋನಾ ಕಾಲದಲ್ಲಿ ಮೇಡ್ ಇನ್ ಇಂಡಿಯಾ ವ್ಯಾಕ್ಸಿನ್ ಬಗ್ಗೆಯೂ ಸುಳ್ಳು ಪ್ರಚಾರ ಮಾಡಿದ್ದರು. ಇದು ಬಿಜೆಪಿ ವ್ಯಾಕ್ಸಿನ್ ಎಂದು ಜರೆದಿದ್ದರು. ಅದೇ ರೀತಿ ಎವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿ ಇಡೀ ಜಗತ್ತಿನ ಮುಂದೆ ಗೋಗರೆದಿದ್ದು. ಇದೀಗ ಸುಪ್ರೀಂ ಕೋರ್ಟ್ ಸರಿಯಾಗಿ ಪೆಟ್ಟು ಕೊಟ್ಟಿದೆ. ಈ ರೀತಿ ಸುಳ್ಳು ಹೇಳಿ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರು ದೇಶದ ಜನರ ಕ್ಷಮೆ ಕೇಳಬೇಕಾಗಿದೆ ಎಂದು ಆಗ್ರಹಿಸಿದರು
ನೇಹಾ ಹತ್ಯೆ ಪ್ರಸ್ತಾಪಿಸಿದ ಪ್ರಧಾನಿ ;
ಇನ್ನು ಇದೇ ವೇಳೆ ನೇಹಾ ಪ್ರಕರಣ, ಬೆಂಗಳೂರು ಕೆಫೆ ಪ್ರಕರಣವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ‘ಕರ್ನಾಟಕದಲ್ಲಿ ಹೆಣ್ಣು ಮಗಳೊಬ್ಬಳ ಹತ್ಯೆಯಿಂದ ಇಡೀ ದೇಶ ಆತಂಕಗೊಂಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕಳವಳ ಗೊಂಡಿದ್ದಾರೆ. ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ವಾಸವಾಗುವ ಬಗ್ಗೆ ಅವರ ಪೋಷಕರು ದಿಗಿಲುಗೊಂಡಿದ್ದಾರೆ. ಇದಕ್ಕೆ ಕಾಂಗ್ರೆಸ್ ನ ಬದ್ಧತೆ ಕಾರಣ, ಕಾಲೇಜ್ ಕ್ಯಾಂಪಸ್ ನಲ್ಲಿ ಹೇಗೆ ಹತ್ಯೆ ನಡೆಯಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಅವರು ವೋಟ್ ಬ್ಯಾಂಕ್ ಗಾಗಿ ಕೆಲವು ದಿನಗಳಲ್ಲಿಯೇ ಆರೋಪಿಯನ್ನು ರಕ್ಷಿಸಲಿದ್ದಾರೆ ಎಂದರು.
ಕಾಂಗ್ರೆಸ್ ತುಷ್ಟೀಕರಣ ರಾಜಕಾರಣಕ್ಕಾಗಿ ಪ್ರಕರಣದ ದಿಕ್ಕು ತಪ್ಪಿಸುವಂತಹ ಹೇಳಿಕೆ ನೀಡುತ್ತಿದೆ. ನಿಮ್ಮಿಂದ ಆಗದಿದ್ರೆ ಬಿಟ್ಟು ಮನೆಗೆ ನಡೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾಜಘಾತುಕ ಪಿಎಫ್ಐ ಅನ್ನು ಬಿಜೆಪಿ ನಿಷೇಧಿಸಿದೆ. ವಯನಾಡಿನಲ್ಲಿ ಗೆಲ್ಲುವ ಸಲುವಾಗಿ ಕಾಂಗ್ರೆಸ್ ಅಂತಹ ಸಂಘಟನೆಯ ಬೆಂಬಲ ಪಡೆದಿದೆ ಎಂದು ಕಿಡಿ ಕಾರಿದರು.
ಕರ್ನಾಟಕವನ್ನು ಹಾಳು ಮಾಡುವುದರಲ್ಲಿ ಕಾಂಗ್ರೆಸ್ ಸರ್ಕಾರ ಬ್ಯೂಸಿಯಾಗಿದೆ. ಅಪರಾಧವನ್ನು ನಿಯಂತ್ರಣಕ್ಕೆ ತರುವ ಬದಲು, ಕಾಂಗ್ರೆಸ್ ಸಮಾಜ ಮತ್ತು ದೇಶ ವಿರೋಧಿ ಮನಸ್ಥಿತಿಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದರು.